ADVERTISEMENT

ನಿಗಮ– ಮಂಡಳಿ: ಕಾರ್ಯಕರ್ತರ ನೇಮಕ ಪಟ್ಟಿ ಶೀಘ್ರ?

ಏಳು ಮಂದಿ ಕೈಬಿಟ್ಟು ಇಬ್ಬರ ಹೆಸರು ಸೇರ್ಪಡೆ?

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರನ್ನಾಗಿ 34 ಶಾಸಕರನ್ನು ನೇಮಕಮಾಡಿದ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ, ಕಾರ್ಯಕರ್ತರನ್ನೂ ನೇಮಕ ಮಾಡುವಂತೆ ಕಾಂಗ್ರೆಸ್‌ನಲ್ಲಿ ಒತ್ತಡ ಹೆಚ್ಚಿದೆ.

39 ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ನೇಮಿಸಿದ ಪಟ್ಟಿ ಕೂಡಾ ಕೆಲವು ದಿನಗಳಿಂದ ಕಾಂಗ್ರೆಸ್‌ ವಲಯದಲ್ಲಿ ಓಡಾಡುತ್ತಿದೆ. ಆದರೆ, ತಮ್ಮ ಅರಿವಿಗೆ ಇಲ್ಲದೆ ಕೆಲವು ಹೆಸರುಗಳು ಆ ಪಟ್ಟಿಯಲ್ಲಿ ಸೇರ್ಪಡೆ ಆಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಪಟ್ಟಿಯನ್ನು ತಡೆಹಿಡಿಯಲಾಗಿತ್ತು.

ADVERTISEMENT

ಇದೀಗ, ಆ ಪಟ್ಟಿಯಲ್ಲಿರುವ ಏಳು ಹೆಸರುಗಳನ್ನು ಕೈಬಿಟ್ಟು, ಹೊಸತಾಗಿ ಎರಡು ಹೆಸರು ಸೇರಿಸಿ ಪರಿಷ್ಕರಿಸಿ ಸಿದ್ಧಪಡಿಸಲಾಗಿದೆ. ಕಾರ್ಯಕರ್ತರನ್ನು ನೇಮಿಸಿದ ಅಧಿಕೃತ ಪಟ್ಟಿ ಯಾವಾಗ ಬೇಕಾದರೂ ಬಿಡುಗಡೆ ಆಗಬಹುದು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಈಗಾಗಲೇ ಸಿದ್ಧವಾಗಿ ಸೋರಿಕೆಯಾಗಿದ್ದ 39 ಮಂದಿಯ ಪಟ್ಟಿಯಲ್ಲಿ ಕಲಬುರಗಿಯ ಕೆಲವು ಹೆಸರುಗಳು ಕಾಣಿಸಿಕೊಂಡಿತ್ತು. ಈ ಹೆಸರುಗಳ ಸೇರ್ಪಡೆ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಕಾರಣವಾಗಿತ್ತು. ಆ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಗೊತ್ತಾಗಿದೆ.

‘ಖರ್ಗೆ ಅಭಿಮಾನಿಗಳ ಸಂಘ’ದ ಅಧ್ಯಕ್ಷ ನರೇಂದ್ರ ಅವರ ಹೆಸರು ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಭಾವದಿಂದ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು ಎಂದು ಹೇಳಲಾಗಿದೆ. ನರೇಂದ್ರ ಮತ್ತು ಪಟ್ಟಿಯಲ್ಲಿದ್ದ ಹೆಸರಿರುವ ಐಶ್ವರ್ಯಾ ಮಹದೇವ್, ರಮೇಶ್ ಬಾಬು ಸೇರಿದಂತೆ ಏಳು ಮಂದಿಯನ್ನು ಕೈಬಿಟ್ಟು ಹೊಸ ಪಟ್ಟಿ ತಯಾರಿಸಲಾಗಿದೆ. 32 ಕಾರ್ಯಕರ್ತರ ಪಟ್ಟಿಗೆ ಹೊಸದಾಗಿ ಇಬ್ಬರ ಹೆಸರು ಸೇರಿಸಲಾಗಿದ್ದು, ಒಟ್ಟು 34 ಕಾರ್ಯಕರ್ತರಿಗೆ ನಿಗಮ, ಮಂಡಳಿ ಹಂಚಿಕೆಗೆ ಮಾಡಲು ತೀರ್ಮಾನಿಸಲಾಗಿದೆ ಎಂದೂ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.