ADVERTISEMENT

ನಿಗಮ– ಮಂಡಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಥಾನ– ಸಮಿತಿ ಸಭೆಯಲ್ಲಿ ತೀರ್ಮಾನ

ಸಚಿವ ಜಿ. ಪರಮೇಶ್ವರ ನೇತೃತ್ವದ ಆಯ್ಕೆ ಸಮಿತಿ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 0:24 IST
Last Updated 4 ಸೆಪ್ಟೆಂಬರ್ 2024, 0:24 IST
ಜಿ.ಸಿ. ಚಂದ್ರಶೇಖರ್
ಜಿ.ಸಿ. ಚಂದ್ರಶೇಖರ್   

ಬೆಂಗಳೂರು: ವಿವಿಧ ನಿಗಮ– ಮಂಡಳಿಗಳ ನಿರ್ದೇಶಕ, ಸದಸ್ಯ ಸ್ಥಾನಗಳಿಗೆ ಒಂದು ಸಾವಿರಕ್ಕೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲು ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದ ಆಯ್ಕೆ ಸಮಿತಿ ನಿರ್ಧರಿಸಿದೆ.

‘ರಾಜ್ಯದಲ್ಲಿರುವ 80ಕ್ಕೂ ಹೆಚ್ಚು ನಿಗಮ ಮಂಡಳಿಗಳಲ್ಲಿ 1,140 ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ. ಇದೇ 13ರ ಒಳಗೆ ಸಂಭವನೀಯರ ಪಟ್ಟಿ ಸಿದ್ಧಪ‍ಡಿಸಿ, ನೇಮಕ ಪ್ರಕ್ರಿಯೆ ನಡೆಸಲಾಗುವುದು’ ಎಂದು ಸಮಿತಿಯ ಸದಸ್ಯರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿಳಿಸಿದರು.

ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಿಗೆ ಸದಸ್ಯರ ನೇಮಕವೂ ಸೇರಿದಂತೆ ಇತ್ತೀಚೆಗೆ ನಡೆದ ಕೆಲವು ನೇಮಕಾತಿಗಳಿಗೆ ಕಾಂಗ್ರೆಸ್ ಪಕ್ಷದ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಿಗಮ – ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ಆಯ್ಕೆಗೆ ರಚಿಸಿದ ಸಮಿತಿಯ ಸಭೆ ವಿಧಾನಸೌಧದಲ್ಲಿ ಮಂಗಳವಾರ ನಡೆಯಿತು.   

ADVERTISEMENT

ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ್ ಲಾಡ್, ಜಿ.ಸಿ. ಚಂದ್ರಶೇಖರ್, ಶಾಸಕರಾದ ರಿಜ್ವಾನ್ ಹರ್ಷದ್, ರೂಪಕಲಾ ಶಶಿಧರ್, ಮುಖಂಡರಾದ ವಿ.ಆರ್. ಸುದರ್ಶನ್, ಎಂ.ಹರೀಶ್ ಕುಮಾರ್ ಸಭೆಯಲ್ಲಿದ್ದರು. ಆಯ್ಕೆ ಪ್ರಕ್ರಿಯೆಗೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಪಕ್ಷ ಸಂಘಟನೆಗೆ ಶ್ರಮಿಸಿದ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಈ ನಿಟ್ಟಿನಲ್ಲಿ ಜಿಲ್ಲಾ ಘಟಕಗಳ ಅಧ್ಯಕ್ಷರಿಂದಲೂ ಹೆಸರುಗಳನ್ನು ಪಡೆಯಬೇಕು. ಯುವ ಕಾಂಗ್ರೆಸ್, ಸಾಮಾಜಿಕ ಜಾಲತಾಣ, ಎನ್‌ಎಸ್‌ಯುಐ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳಲ್ಲಿ ಕಾರ್ಯನಿರ್ವಹಿಸಿದ ಅರ್ಹರನ್ನು ಗುರುತಿಸಬೇಕು. ರಾಜಕೀಯವಾಗಿ ಈವರೆಗೂ ಗುರುತಿಸಿಕೊಳ್ಳದ ತಳ ಸಮುದಾಯದವರಿಗೂ ನಿಗಮ– ಮಂಡಳಿಗಳಲ್ಲಿ ಅವಕಾಶ ನೀಡಬೇಕು ಎಂದು ಪರಮೇಶ್ವರ ಸೂಚಿಸಿದರು.

ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು, ಪಕ್ಷದ ಶಾಸಕರು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು, ಸಂಸದರು ಮಾಜಿ ಸಂಸದರು, ಪ್ರಮುಖರು ಸೇರಿ ಹೆಸರುಗಳನ್ನು ಶಿಫಾರಸು ಮಾಡಲು ಸೂಚಿಸಲಾಗಿದೆ. ಅಲ್ಲದೆ, ಆಯ್ಕೆ ಸಮಿತಿಯಲ್ಲಿರುವ ಸದಸ್ಯರಿಗೆ ಮೂರು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಪಕ್ಷ ಸಂಘಟನೆಯಲ್ಲಿ ಐದು ವರ್ಷಗಳಿಂದ ಗುರುತಿಸಿಕೊಂಡವರಿಗೆ ನಿಗಮ– ಮಂಡಳಿಗಳಲ್ಲಿನ ನಿರ್ದೇಶಕ– ಸದಸ್ಯ ಸ್ಥಾನಗಳಲ್ಲಿ ಅವಕಾಶ ನೀಡಲು ನಿರ್ಧರಿಸಿದ್ದೇವೆ. ಶೀಘ್ರದಲ್ಲಿ ನೇಮಕ ನಡೆಯಲಿದೆ.

-ಜಿ.ಸಿ. ಚಂದ್ರಶೇಖರ್ ಕೆಪಿಸಿಸಿ ಕಾರ್ಯಾಧ್ಯಕ್ಷ

‘ಕೆಪಿಸಿಸಿ ಟಿವಿ’ ಶೀಘ್ರ

‘ರಾಜ್ಯ ಕಾಂಗ್ರೆಸ್‌ ಘಟಕದ ಚಟುವಟಿಕೆಯನ್ನು ಜನರ ಬಳಿಗೆ ತಲುಪಿಸಲು ‘ಕೆಪಿಸಿಸಿ ಟಿವಿ’ ಹೆಸರಿನಲ್ಲಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಲು ನಿರ್ಧರಿಸಲಾಗಿದೆ. ಈ ಡಿಜಿಟಲ್‌ ಚಾನೆಲ್‌ ಮೂಲಕ ಪಕ್ಷದ ತತ್ವ ಸಿದ್ಧಾಂತ ರಾಜ್ಯ ಸರ್ಕಾರದ ಯೋಜನೆಗಳು ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳು ಕೆಪಿಸಿಸಿ ಅಧ್ಯಕ್ಷರು ಸಚಿವರು ಮುಖಂಡರ ಹೇಳಿಕೆಗಳನ್ನು ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಅಲ್ಲದೆ ಸಂವಾದ ಚರ್ಚೆಗಳಿಗೂ ಈ ಮಾಧ್ಯಮವನ್ನು ವೇದಿಕೆಯಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜಿ.ಸಿ. ಚಂದ್ರಶೇಖರ್ ತಿಳಿಸಿದರು.

ಯಾರಿಗೆ ಎಷ್ಟು ಸ್ಥಾನ?

* ಪಕ್ಷದ ಮುಂಚೂಣಿ ಘಟಕಗಳಲ್ಲಿ ಇರುವವರಿಗೆ 10 ಸ್ಥಾನ * ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಬ್ಬರಂತೆ ಮಹಿಳೆಯರಿಗೆ ಅವಕಾಶ * ಈವರೆಗೂ ಅವಕಾಶ ಸಿಗದ ಸಣ್ಣ ಸಣ್ಣ ಸಮುದಾಯಕ್ಕೆ 275 ಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.