ADVERTISEMENT

ಹಣಕಾಸು ಇಲಾಖೆ ಅನುಮತಿ ಪಡೆದೆ ಪ್ರಕ್ರಿಯೆ: D ಗ್ರೂಪ್ ಹುದ್ದೆಗಳ ನೇಮಕಾತಿ ವಿವಾದ

ವಿಧಾನಪರಿಷತ್‌ ಸಚಿವಾಲಯದ ಕ್ರಮಕ್ಕೆ ಆಕ್ಷೇಪ

ಎಸ್.ರವಿಪ್ರಕಾಶ್
Published 24 ಮೇ 2024, 23:30 IST
Last Updated 24 ಮೇ 2024, 23:30 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ಹಣಕಾಸು ಇಲಾಖೆಯ ಒಪ್ಪಿಗೆ ಪಡೆಯದೇ, ನೇಮಕಾತಿ ನಿಯಮಾವಳಿಗಳನ್ನೂ ಉಲ್ಲಂಘಿಸಿ  ‘ಡಿ’ ಗ್ರೂಪ್‌ನ 29 ಮತ್ತು 3 ಚಾಲಕ ಹುದ್ದೆಗಳೂ ಸೇರಿ 32 ಹುದ್ದೆಗಳ ನೇಮಕಾತಿಗೆ ಮುಂದಾಗಿರುವ ವಿಧಾನಪರಿಷತ್‌ ಸಚಿವಾಲಯದ ಕ್ರಮ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಹುದ್ದೆಗಳ ನೇಮಕಕ್ಕೆ ಹಣಕಾಸು ಇಲಾಖೆ ಸ್ಪಷ್ಟವಾಗಿ ಅನುಮತಿ ನಿರಾಕರಿಸಿದೆ. ನೇಮಕಾತಿ ಸಂಬಂಧ ಅಧಿಸೂಚನೆಗಳನ್ನೂ ಹಿಂಪಡೆಯುವಂತೆಯೂ ಕಟ್ಟುನಿಟ್ಟಾಗಿ ಸೂಚಿಸಿದೆ. ಆದರೆ ವಿಧಾನಪರಿಷತ್‌ ಸಚಿವಾಲಯ ಮಾತ್ರ ಹಣಕಾಸು ಇಲಾಖೆಯ ನಿರ್ದೇಶನವನ್ನು ಕಡೆಗಣಿಸಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಪರಿಷತ್‌ ಸಚಿವಾಲಯದ ನೇಮಕಾತಿ ನಿಯಮಾವಳಿಯಲ್ಲಿ ಸಂದರ್ಶನದ ಮೂಲಕ ನೇಮಕಕ್ಕೆ ಅವಕಾಶವೇ ಇಲ್ಲ. ಮೆರಿಟ್‌ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಬೇಕು. ಆದರೆ, ‘ಸಂದರ್ಶನ’ದ ಮೂಲಕ ನೇಮಕಾತಿ ಮಾಡಲು ಪರಿಷತ್ ಸಚಿವಾಲಯ ಮುಂದಾಗಿದೆ. 

ADVERTISEMENT

ಕರ್ನಾಟಕ ವಿಧಾನಪರಿಷತ್‌ ಸಚಿವಾಲಯ (ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕಾತಿ ಸೇವಾ ಷರತ್ತುಗಳು) 2021 ನಿಯಮ 2022ರ ಏಪ್ರಿಲ್‌ 1ರಂದು ಜಾರಿಗೆ ಬಂದಿತು. ಸೆಕ್ಷನ್ 9ರ ಪ್ರಕಾರ ಗ್ರೂಪ್ ‘ಡಿ’ ಸಿಬ್ಬಂದಿ ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ‘ಸಂದರ್ಶನ’ ನಡೆಸುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಕೇಂದ್ರ ಸರ್ಕಾರವೂ ‘ಸಿ’ ಮತ್ತು ‘ಡಿ’ ಗುಂಪಿನ ಹುದ್ದೆಗಳಿಗೆ ಸಂದರ್ಶನವನ್ನು ರದ್ದುಪಡಿಸಿ 2015ರಲ್ಲಿಯೇ ಆದೇಶ ಹೊರಡಿಸಿತ್ತು. ಇದನ್ನು ಹಲವು ರಾಜ್ಯಗಳು ಅನುಸರಿಸುತ್ತಿವೆ. ನಮ್ಮ ರಾಜ್ಯದಲ್ಲೂ ಅದೇ ಪದ್ಧತಿ ಜಾರಿ ಬಂದಿದೆ. ಆದರೆ, ಪರಿಷತ್‌ ಸಚಿವಾಲಯವು ಸಂದರ್ಶನ ನಡೆಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಲು ಮುಂದಾಗಿದೆ ಎಂದು ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಸಂದರ್ಶನವನ್ನು ಕೈಬಿಟ್ಟು ಮೆರಿಟ್‌ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಆದ್ದರಿಂದ ನೇಮಕಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ವಾಪಸ್‌ ಪಡೆದು ಹೊಸ ಅಧಿಸೂಚನೆ ಹೊರಡಿಸಬೇಕು’ ಎಂದು ಹುದ್ದೆಯ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.

‘ಮೆರಿಟ್‌ ಆಧಾರದಲ್ಲಿ ನೇಮಕಾತಿ ಮಾಡಿದರೆ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಅವಕಾಶವಿರುವುದಿಲ್ಲ. ಸಂದರ್ಶನ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ನಿರುದ್ಯೋಗಿ ಯುವಕ– ಯುವತಿಯರು ಏಜೆಂಟ್‌ಗಳ ಕೈಗೆ ಸಿಲುಕಿ ಹಣ ಕೊಟ್ಟು ಮೋಸ ಹೋಗುವ ಸಾಧ್ಯತೆ ಇದೆ. ಭ್ರಷ್ಟಾಚಾರಕ್ಕೆ ಆಸ್ಪದ ಕೊಡುವುದನ್ನು ತಪ್ಪಿಸಲು ಹೊಸ ಅಧಿಸೂಚನೆ ಹೊರಡಿಸುವುದು ಸೂಕ್ತ’ ಎಂದು ಆಕಾಂಕ್ಷಿಗಳು ಪ್ರತಿಪಾದಿಸಿದ್ದಾರೆ.

ಅಧಿಸೂಚನೆ ಹಿಂಪಡೆಯಿರಿ: ಹಣಕಾಸು ಇಲಾಖೆ ತಾಕೀತು

‘ವಿಧಾನಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದಗಳ ಹುದ್ದೆಗಳ ನೇರ ನೇಮಕಾತಿ ವಿಚಾರ ಇನ್ನೂ ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇದುವರೆಗೆ ಒಪ್ಪಿಗೆ ನೀಡಿಲ್ಲ’ ಎಂದು ಹಣಕಾಸು ಇಲಾಖೆಯು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಾರ್ಚ್‌ 21ರಂದು ಪತ್ರ ಬರೆದಿದೆ. ‘ಅನುಮತಿ ನೀಡದೇ ಇರುವುದು ಗಮನಕ್ಕೆ ಬಂದಿದ್ದರೂ ಸಚಿವಾಲಯ ಈ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇದು ಸರಿಯಲ್ಲ’ ಎಂದು ಹೇಳಿದೆ. ‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆಯಲ್ಲಿ  ವಾಹನ ಚಾಲಕರು ಮತ್ತು ಗ್ರೂಪ್ ‘ಡಿ’ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಇನ್ನು ಮುಂದೆ ಖಾಲಿ ಆಗುವ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕವೇ ಭರ್ತಿ ಮಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದು ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಎಲ್ಲ ಇಲಾಖೆಗಳೂ ಪಾಲಿಸುತ್ತಿವೆ’ ಎಂದೂ ತಿಳಿಸಿದೆ. ‘ವಿಧಾನಪರಿಷತ್‌ ಸಚಿವಾಲಯವು ಮಾರ್ಚ್‌ 4 ಮತ್ತು 12ರಂದು ಹೊರಡಿಸಿರುವ ಅಧಿಸೂಚನೆಗಳನ್ನು ಪೂರ್ವ ನಿದರ್ಶನವೆಂದು ಪರಿಗಣಿಸಿ ಎಲ್ಲಾ ಆಡಳಿತ ಇಲಾಖೆಗಳು ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಾಧ್ಯತೆ ಇರುತ್ತದೆ. ನಿಯಮಗಳ ಪ್ರಕಾರ ಯಾವುದೇ ಹುದ್ದೆ ಭರ್ತಿ ಮಾಡಲು ಆರ್ಥಿಕ ಇಲಾಖೆಯ ಅನುಮತಿ ಕಡ್ಡಾಯ. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಎರಡೂ ಅಧಿಸೂಚನೆಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಟ್ಟುನಿಟ್ಟಿನಿಂದ ಆಯ್ಕೆಗೆ ಸೂಚನೆ: ಹೊರಟ್ಟಿ

‘ಸಿಬ್ಬಂದಿ ನೇಮಕಾತಿ ವಿಚಾರ ಪರಿಷತ್‌ ಕಾರ್ಯದರ್ಶಿಯವರಿಗೆ ಸಂಬಂಧಿಸಿದ್ದಾಗಿದೆ. ನೇರ ನೇಮಕಾತಿ ಬಿಟ್ಟು ಸಂದರ್ಶನ ಮೂಲಕ ನಡೆಸಲು ಹೊರಟಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿಚಾರದ ಬಗ್ಗೆ ಕಾರ್ಯದರ್ಶಿ ಅವರನ್ನೂ ಪ್ರಶ್ನಿಸಿದ್ದೇನೆ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ‘ಸಂದರ್ಶನದ ಮೂಲಕ ನೇಮಕಾತಿ ಎಂದು ಒಮ್ಮೆ ಅಧಿಸೂಚನೆ ಹೊರಡಿಸಿದ ಬಳಿಕ ಸಂದರ್ಶನದ ಮೂಲಕವೇ ನಡೆಸಬೇಕು ಎಂದು ಆಡಳಿತ ಮತ್ತು ಸಿಬ್ಬಂದಿ ಇಲಾಖೆ ತಿಳಿಸಿದೆ. ಒಟ್ಟು 7500 ಅರ್ಜಿಗಳು ಬಂದಿವೆ. ಹೀಗಾಗಿ 1:5 ಅನುಪಾತದಂತೆ ಸಂದರ್ಶನ ನಡೆಸಬೇಕು ಇಲ್ಲವೇ ಕೆಪಿಎಸ್‌ಸಿ ಯಾವ ವಿಧಾನ ಅನುಸರಿಸುತ್ತದೆಯೋ ಆ ರೀತಿ ನೇಮಕಾತಿ ಮಾಡಲು ಸೂಚಿಸಿದ್ದೇನೆ. ಯಾವುದೇ ಅಪವಾದಗಳ ಬರಬಾರದು’ ಎಂದರು.  ‘ರಾಜಭವನ ವಿಧಾನಸಭೆ ಮತ್ತು ಪರಿಷತ್‌ಗೆ ನೇಮಕಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ. ಹಣಕಾಸು ಇಲಾಖೆ ಅಧಿಕಾರಿಗಳಿಗೆ ಆ ಮಾಹಿತಿ ಕೊರತೆಯಿಂದ ಪತ್ರ ಬರೆದಿದ್ದಾರೆ. ಈ ಸಂಬಂಧ ಹಣಕಾಸು ಇಲಾಖೆಗೆ ನೋಟಿಸ್‌ ನೀಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.