ಬೆಂಗಳೂರು:ವಿಧಾನಪರಿಷತ್ ಸಚಿವಾಲಯದಲ್ಲಿ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮದ ಅನ್ವಯ ಕಾರ್ಯದರ್ಶಿ–2 ಹುದ್ದೆಗೆ ಅವಕಾಶವಿಲ್ಲ ಎಂದು ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು ಆರ್ಥಿಕ ಇಲಾಖೆಗೆ ತಿಳಿಸಿದ್ದಾರೆ.
ಪರಿಷತ್ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ನಿರ್ಮಲಾ ಅವರು ನಿವೃತ್ತಿ ಹೊಂದುವವರೆಗೆ ತಾತ್ಕಾಲಿಕವಾಗಿ ಕಾರ್ಯದರ್ಶಿ–2 ಹುದ್ದೆ ಸೃಜಿಸುವ ಸಂಬಂಧ ಬಗ್ಗೆ ಆರ್ಥಿಕ ಇಲಾಖೆ ಕೇಳಿರುವ ಮಾಹಿತಿಗೆ ಕಾರ್ಯದರ್ಶಿ ಸುದೀರ್ಘ ಟಿಪ್ಪಣಿ ಬರೆದಿದ್ದಾರೆ.
ವಿಧಾನ ಪರಿಷತ್ತು ಇರುವ ಇತರೆ ರಾಜ್ಯಗಳಲ್ಲಿ ಎಲ್ಲಿಯೂ ಎರಡು ಕಾರ್ಯದರ್ಶಿ ಹುದ್ದೆಗಳು ಇಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ 225 ಶಾಸಕರಿದ್ದು, 900 ಮಂದಿ ಅಧಿಕಾರಿ, ಸಿಬ್ಬಂದಿ ಇದ್ದಾರೆ. ಅಲ್ಲಿಯೂ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಮತ್ತು ಕಾರ್ಯದರ್ಶಿ–2 ಹುದ್ದೆ ಇರುವುದಿಲ್ಲ. ವಿಧಾನ ಪರಿಷತ್ತಿನಂತಹ ಚಿಕ್ಕ ಸಚಿವಾಲಯಕ್ಕೆ ಎರಡು ಕಾರ್ಯದರ್ಶಿ ಹುದ್ದೆಗಳ ಅವಶ್ಯಕತೆ ಇರುವುದಿಲ್ಲ. ಇಲ್ಲಿ 75 ಸದಸ್ಯರಿದ್ದು, 284 ಅಧಿಕಾರಿ, ಸಿಬ್ಬಂದಿ ಇದ್ದಾರೆ. ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯು ಕೆಳಗಿನ ಹಂತದ ಹುದ್ದೆಯಾಗಿದೆ. ಅದನ್ನು ಕಾರ್ಯದರ್ಶಿ–2 ಹುದ್ದೆಗೆ ಉನ್ನತೀಕರಿಸುವುದರಿಂದ ಎರಡು ಕಾರ್ಯದರ್ಶಿ ಹುದ್ದೆಗಳು ಸಮಾನಾಂತರ ಹುದ್ದೆಗಳಾಗುತ್ತವೆ. ಎರಡೂ ಕಾರ್ಯದರ್ಶಿ ಹುದ್ದೆಗಳಿಗೆ ಕಾರ್ಯ ಹಂಚಿಕೆ ಆಗುವುದರಿಂದ ಕಚೇರಿ ಆಡಳಿತದಲ್ಲಿ ವಿನಾಕಾರಣ ಗೊಂದಲ, ಭಿನ್ನಭಿಪ್ರಾಯ, ತಿಕ್ಕಾಟಗಳಿಗೆ ಕಾರಣವಾಗುತ್ತದೆ. ಗುಂಪುಗಾರಿಕೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ನಿರ್ಮಲಾ ಅವರು ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಹೊಂದಿ ಎರಡು ವರ್ಷಗಳಾಗಿದ್ದು, ದೀರ್ಘ ಕಾಲ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವುದಿಲ್ಲ. ಅಲ್ಲದೇ, ನೌಕರರ ಜೇಷ್ಠತೆ ಮತ್ತು ಸೇವಾ ಹಿರಿತನವನ್ನು ಕಾಪಾಡಬೇಕಾಗಿದೆ. ಈ ಎಲ್ಲಾ ಕಾರಣಗಳಿಂದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯದರ್ಶಿ–2 ಹುದ್ದೆಗೆ ಉನ್ನತೀಕರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.