ADVERTISEMENT

ಟಿಪ್ಪು ಜಯಂತಿ ತಗಾದೆ: ಕಲಾಪಕ್ಕೆ ಬಾಧೆ

ಮೂರು ಬಾರಿ ಕಲಾಪ ಮುಂದೂಡಿದ ಸಭಾಪತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:24 IST
Last Updated 13 ಡಿಸೆಂಬರ್ 2018, 19:24 IST
ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದರು
ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದರು   

ಬೆಳಗಾವಿ: ಟಿಪ್ಪು ಜಯಂತಿ ಕುರಿತ ಗಮನ ಸೆಳೆಯುವ ಸೂಚನೆಯನ್ನು ಕಲಾಪಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಾಗೂ ಸರ್ಕಾರ ಈ ಕುರಿತು ತಕ್ಷಣವೇ ಉತ್ತರ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಗುರುವಾರ ಧರಣಿ ನಡೆಸಿದರು.

ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದ್ದರಿಂದ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮೂರು ಬಾರಿ ಕಲಾಪ ಮುಂದೂಡಬೇಕಾಯಿತು. ಧರಣಿಯಿಂದಾಗಿ ಸುಮಾರು ಮೂರು ಗಂಟೆಗಳ ಕಾಲ ಕಲಾಪಕ್ಕೆ ಅಡ್ಡಿ ಉಂಟಾಯಿತು.

ಉತ್ತರ ನೀಡುವ ಬಗ್ಗೆ ದಿನದ ಕಲಾಪ ಮುಗಿಯುವುದರೊಳಗೆ ಸರ್ಕಾರದ ನಿಲುವು ಸ್ಪಷ್ಟಪಡಿಸುವುದಾಗಿ ಸಭಾ
ನಾಯಕಿ ಜಯಮಾಲಾ ಭರವಸೆ ನೀಡಿದ್ದರಿಂದ ಬಿಜೆಪಿಯವರು ಧರಣಿ ಹಿಂಪಡೆದರು.

ADVERTISEMENT

‘ಟಿಪ್ಪು ಜಯಂತಿಯಿಂದಾಗಿ ಕೊಡವರ ಮನಸ್ಸಿಗೆ ನೋವುಂಟಾಗಿದೆ. ಇದರಿಂದ ಕೋಮುಸೌಹಾರ್ದ ಹಾಳಾಗಿದೆ’ ಎಂದು ಆರೋಪಿಸಿ ಬಿಜೆಪಿ ಸದಸ್ಯ ಎಂ.ಪಿ.ಸುನೀಲ್‌ ಸುಬ್ರಮಣಿ ಅವರು ಮುಖ್ಯಮಂತ್ರಿಯ ಗಮನ ಸೆಳೆಯುವ ಸೂಚನೆಯನ್ನು ಬುಧವಾರ ಮಂಡಿಸಿದ್ದರು. ಇದಕ್ಕೆ ಮುಖ್ಯಮಂತ್ರಿಯಿಂದ ಗುರುವಾರ ಉತ್ತರ ಕೊಡಿಸುವುದಾಗಿ ಸಭಾನಾಯಕಿ ಭರವಸೆ ನೀಡಿದ್ದರು. ಆದರೆ, ಗುರುವಾರದ ಕಲಾಪಗಳ ಪಟ್ಟಿಯಲ್ಲಿ ಈ ವಿಷಯ ಇರಲಿಲ್ಲ. ಇದು ವಿರೋಧ ಪಕ್ಷದ ಆಕ್ರೋಶಕ್ಕೆ ಕಾರಣವಾಗಿತ್ತು.

ಮತ್ತೆ ಸದನ ಆರಂಭವಾದಾಗ ‘ಧರಣಿಯಿಂದ ಸಮಸ್ಯೆ ಬಗೆಹರಿಯದು. ಆಸನಗಳಿಗೆ ಮರಳಿದರೆ ಸರ್ಕಾರ ಉತ್ತರ ಕೊಡಲು ಸಿದ್ಧವಿದೆ’ ಎಂದು ಸಭಾಪತಿ ಹೇಳಿದರು. ಅವರ ಮಾತಿಗೆ ಬೆಲೆಕೊಟ್ಟು ಬಿಜೆಪಿಯವರು ಪ್ರತಿಭಟನೆ ಕೈಬಿಟ್ಟರು. ಅಷ್ಟರಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರು ‘ಶೇ‌ಮ್‌...ಶೇಮ್‌...’ ಎಂದು ಅಪಹಾಸ್ಯ ಮಾಡಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಮತ್ತೆ ಧರಣಿ ಆರಂಭಿಸಿದರು. ಮತ್ತೆ ಗದ್ದಲ ಶುರುವಾಗಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಮೂರನೇ ಬಾರಿ ಮುಂದೂಡಿದರು.

ಕಲಾಪ ಮತ್ತೆ ಆರಂಭವಾದಾಗ ಸಭಾನಾಯಕಿ, ‘ಆಡಳಿತ ಪಕ್ಷದ ಸದಸ್ಯರು ಶೇಮ್‌ ಶೇಮ್‌ ಪದ ಬಳಸಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದರು. ಬಳಿಕ ವಿರೋಧ ಪಕ್ಷದವರು ಧರಣಿ ಕೈಬಿಟ್ಟರು.

‘ಶೇಮ್.... ಶೇಮ್‌ ಪದ ಬಳಸಿದವರ ವಿರುದ್ಧ ಕ್ರಮ’

‘ಸರ್ಕಾರದ ಭರವಸೆ ಸಿಗದೆ ವಿರೋಧ ಪಕ್ಷ ಧರಣಿ ಹಿಂಪಡೆದ ಉದಾಹರಣೆ ಇಲ್ಲ. ಪೀಠದ ಮಾತಿಗೆ ಬೆಲೆ ಕೊಟ್ಟು ಧರಣಿ ಹಿಂದಕ್ಕೆ ಪಡೆದಿದ್ದೇವೆ. ಆದರೂ ಆಡಳಿತ ಪಕ್ಷದವರು ಶೇಮ್‌ ಶೇಮ್‌ ಎಂದು ನಮ್ಮನ್ನು ಅಪಹಾಸ್ಯ ಮಾಡಿದ್ದು ಸರಿಯಲ್ಲ’ ಎಂದು ಕೋಟ ಶ್ರೀನಿವಾಸ ಪೂಜಾರಿ ಬೇಸರ ವ್ಯಕ್ತಪಡಿಸಿದರು.

‘ಈ ಪದ ಬಳಸಿದವರು ಯಾರೆಂದು ಗೊತ್ತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಭಾಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.