ADVERTISEMENT

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್ ಸಂಭಾವ್ಯರ ಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 31 ಮೇ 2024, 0:18 IST
Last Updated 31 ಮೇ 2024, 0:18 IST
   

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಜೂನ್ 13ರಂದು ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಪಕ್ಷ ಗೆಲ್ಲಲು ಅವಕಾಶ ಇರುವ ಏಳು ಸ್ಥಾನಗಳಿಗೆ 14 ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸಮುದಾಯವಾರು ಟಿಕೆಟ್ ನೀಡುವ ಕುರಿತಂತೆ ಚರ್ಚೆ ನಡೆದಿದ್ದು, ಹಿಂದುಳಿದ ವರ್ಗಕ್ಕೆ ಎರಡು, ಲಿಂಗಾಯತ, ಒಕ್ಕಲಿಗ, ‌ಮುಸ್ಲಿಂ, ಕ್ರಿಶ್ಚಿಯನ್, ಎಸ್‌ಸಿ (ಬಲ), ಮಹಿಳೆ ಸಮುದಾಯಕ್ಕೆ ತಲಾ ಒಂದರಂತೆ ಟಿಕೆಟ್ ಹಂಚಿಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಜೂನ್‌ 2ರಂದು ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ.

ವಿಧಾನಸಭೆ ಚುನಾವಣೆ ಯಲ್ಲಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಯತೀಂದ್ರ ಸಿದ್ದರಾಮಯ್ಯ, ಸಚಿವ ಎನ್‌.ಎಸ್‌. ಬೋಸರಾಜು, ಹಾಲಿ ಸದಸ್ಯ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಕೆ. ಗೋವಿಂದರಾಜು, ಕೆಪಿಸಿಸಿ ಖಜಾಂಚಿ ವಿನಯ್‌ ಕಾರ್ತಿಕ್‌, ಕಾರ್ಯಾಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ವಿ.ಆರ್‌. ಸುದರ್ಶನ್‌ ಮುಂತಾದವರ ಹೆಸರು ಮುಂಚೂಣಿಯಲ್ಲಿದೆ ಎಂದೂ ಮೂಲಗಳು ಹೇಳಿವೆ.

ADVERTISEMENT

65 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:  ‘ನಾವು 65 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕೊಟ್ಟಿದ್ದೇವೆ. ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಯತೀಂದ್ರ ಅವರ ವಿಚಾರದಲ್ಲಿ ಹೈಕಮಾಂಡ್ ನಾಯಕರು ಈ ಹಿಂದೆಯೇ ಮಾತು ಕೊಟ್ಟಿದ್ದರು. ಬೆಂಗಳೂರಷ್ಟೇ ಅಲ್ಲದೆ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲ ವಲಯಗಳಿಂದಲೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಂಗಳೂರಿನಲ್ಲಿ 21, ಚಿಕ್ಕಮಗಳೂರಿನಲ್ಲಿ 9 ‌ಆಕಾಂಕ್ಷಿ ಗಳಿದ್ದಾರೆ’ ಎಂದರು.

‘ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದ ಹಿರಿಯರ ಅಭಿಪ್ರಾಯ ಕೇಳಬೇಕಿತ್ತು’ ಎಂಬ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾವು ಅವರ ಅಭಿಪ್ರಾಯ ಕೇಳಿದ್ದೇವೆ. ಪರಮೇಶ್ವರ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ’ ಎಂದರು.

‘ಆಯ್ಕೆಗೆ ಮಾನದಂಡ ಏನು’ ಎಂದು ಕೇಳಿದಾಗ, ‘ಸಂಘಟನೆಗೆ ಆದ್ಯತೆ ನೀಡಲಾಗುವುದು. ಅನೇಕ ಪ್ರಮುಖರು, ಹಿರಿಯರು, ಚುನಾವಣೆಯಲ್ಲಿ ಸೋತವರು, ವಿಧಾನಸಭೆ ಟಿಕೆಟ್ ತ್ಯಾಗ ಮಾಡಿರುವವರು ಟಿಕೆಟ್ ಕೇಳಿ‌ದ್ದಾರೆ’ ಎಂದರು.

‘ಸಚಿವ ಎನ್‌.ಎಸ್‌. ಬೋಸರಾಜು ಅವರು ಮುಂದುವರಿಯು ತ್ತಾರೆಯೇ?’ ಎಂಬ ಪ್ರಶ್ನೆಗೆ, ‘ಈ ಬಗ್ಗೆಯೂ ಹೈಕಮಾಂಡ್ ನಾಯಕರು ತೀರ್ಮಾನಿಸಲಿದ್ದಾರೆ’ ಎಂದರು.

‘ಜೂನ್‌ 2ರಂದು ಸಿಎಲ್‌ಪಿ ಸಭೆ’ 

‘ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಜೂನ್ 2ರಂದು ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪರಿಷತ್ ಚುನಾವಣೆ ಸೇರಿದಂತೆ ಕೆಲವು ವಿಚಾರಗಳನ್ನು ಚರ್ಚಿಸಲಾಗುವುದು. ಜೂನ್ 1ರಂದು ಕರೆಯಲಾಗಿದ್ದ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಸುರೇಶ್ ಹೆಸರು ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, ‘ಇದು ಶುದ್ದ ಸುಳ್ಳು. ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿಯಲಿ. ನಾನು ಅಧಿಕಾರ ಬಿಡುವ ವೇಳೆಗೆ ಎಲ್ಲವನ್ನೂ ಒಂದು ಹಂತಕ್ಕೆ ತಂದು ನಿಲ್ಲಿಸಬೇಕು. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಕಟ್ಟಡ ದುರ್ಬಲವಾಗುತ್ತಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಬೇಕಿದೆ’ ಎಂದರು.

ರಾಜ್ಯ ಆಳುತ್ತಿರುವ ‘ಅಲ್ಟ್ರಾ ಎಕ್ಸ್‌ಟ್ರೀಮ್’ ಎಡಪಂಥೀಯರು: ಬಿ.ಎಲ್‌.ಸಂತೋಷ್‌

ಉಡುಪಿ: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿಲ್ಲ, ಅಲ್ಟ್ರಾ ಎಕ್ಸ್‌ಟ್ರೀಮ್ ಎಡಪಂಥೀಯರು ಆಡಳಿತ ನಡೆಸುತ್ತಿದ್ದಾರೆ. ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಸಮಿತಿಯಲ್ಲಿ ಹಿಂದೂ ವಿರೋಧಿಗಳನ್ನೇ ತುಂಬಿಸಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆರೋಪಿಸಿದರು.

ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ನಡೆದ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ನಾಯಕರ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಶಿಕ್ಷಣ ನೀತಿ ಈವರೆಗೂ ಜಾರಿಯಾಗಿಲ್ಲ. ರಾಜ್ಯ ಸರ್ಕಾರದಲ್ಲಿ ತಾಳ– ಮೇಳದ ಕೊರತೆ ಇದೆ’ ಎಂದರು.

‘ಉಚಿತ ಭಾಗ್ಯಗಳನ್ನು ಬಡವರು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಚುನಾವಣೆ ನಂತರ ಯಾವ ಬಿಟ್ಟಿ ಭಾಗ್ಯವೂ ಸಿಗಲ್ಲ, ಮೂರು ತಿಂಗಳ ಅಕ್ಕಿ ಹಣ ಬಂದಿಲ್ಲ ಎಂದ ಅವರು, ರಾಜ್ಯದಲ್ಲಿ ಅಧಿಕಾರಿಗಳು ಯಾವುದೇ ಆದೇಶಗಳಿಗೆ ಸಹಿ ಹಾಕುತ್ತಿಲ್ಲ. ಕರ್ನಾಟಕದ ಸ್ಥಿತಿಯು ತೆಲಂಗಾಣದಂತೆ ಆಗಿದೆ’ ಎಂದು ಆರೋಪಿಸಿದರು.

ಪರಿಷತ್‌ ಚುನಾವಣೆ– ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು– ಗುರಿಕಾರ ವಿಶ್ವಾಸ

ಬೆಂಗಳೂರು: ‘ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನಪರಿಷತ್‌ನ‌ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡರಿಗೆ ಈ ಹಿಂದೆ ಸಿಗದಂಥ ಅಭೂತಪೂರ್ವ ಬೆಂಬಲ ಸಿಗಲಿದೆ’ ಎಂದು ಕೆಪಿಸಿಸಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ರಾಮೋಜಿ ಗೌಡ ಅವರು ಕಳೆದ ಎರಡು ಬಾರಿ ಅತ್ಯಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಈ ಬಾರಿ ಮತದಾರರು ಅವರ ಪರವಾಗಿದ್ದಾರೆ. ಅಲ್ಲದೇ ಎರಡು ವರ್ಷಗಳಿಂದ ಉದ್ಯೋಗ ಮೇಳ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಮತದಾರರ ನೋಂದಣಿ ಕಾರ್ಯ ನಡೆಸಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ’ ಎಂದರು.

‘ದೇವರಾಜ ಅರಸು ಅವರು ಪದವೀಧರರಿಗೆ ಭತ್ಯೆ ಆರಂಭಿಸಿದರು. ಗುಂಡೂರಾವ್ ಅವರು ನಿರುದ್ಯೋಗ ಭತ್ಯೆ ಪಡೆಯುತ್ತಿದ್ದ ಪದವೀಧರರನ್ನು ಕಾಯಂಗೊಳಿಸುವ ಕೆಲಸ ಮಾಡಿದರು. ಈಗ ಯುವನಿಧಿ ಎನ್ನುವ ಗ್ಯಾರಂಟಿ ನೀಡಿ ಪಕ್ಷ ಯುವಕರಲ್ಲಿ ಆಶಾಕಿರಣ ಮೂಡಿಸುವ ಕೆಲಸ ಮಾಡಿದೆ’ ಎಂದರು.

‘ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಸಾಕಷ್ಟು ಕೊಡುಗೆ ಕೊಟ್ಟಿದೆ. 11,494 ಶಿಕ್ಷಕರ ಹುದ್ದೆ, 35 ಸಾವಿರ ಅತಿಥಿ ಶಿಕ್ಷಕರ ಹುದ್ದೆ, 2,372 ಶಾಲೆಗಳ ಪೈಕಿ 7,342 ಕೊಠಡಿಗಳ ದುರಸ್ತಿಗೆ ₹ 70 ಕೋಟಿ ಅನುದಾನ. ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡುವ ಸಲುವಾಗಿ ₹ 280 ಕೋಟಿ ಅನುದಾನ. 45 ಲಕ್ಷ ವಿದ್ಯಾರ್ಥಿಗಳಿಗೆ ₹ 143 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ, ರಾಜ್ಯದ ವಿಶ್ವವಿದ್ಯಾನಿಲಯಗಳಿಗೆ ₹ 350 ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ₹ 5 ಸಾವಿರದಿಂದ ₹ 8 ಸಾವಿರ ಸಂಬಳ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರಿಗೆ ₹ 5 ಲಕ್ಷ ಇಡಗಂಟು ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ. ರಜೆ ಸೌಲಭ್ಯ, ₹ 5 ಲಕ್ಷ ಮೊತ್ತದ ವೈದ್ಯಕೀಯ ಸೌಲಭ್ಯ, ಕೋರಿಕೆಯ ವರ್ಗಾವಣೆ ಸೇರಿದಂತೆ ಅನೇಕ ಶಿಕ್ಷಕ ಪರ ಕೆಲವನ್ನು ಕಾಂಗ್ರೆಸ್ ಮಾಡಿದೆ’ ಎಂದರು.

ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮಂಜೇಗೌಡ, ನಿಕಟಪೂರ್ವ ಕಾರ್ಯದರ್ಶಿ ಮಾಲತೇಶ್ ಅಣ್ಣಿಗೇರಿ, ಮುಖಂಡರಾದ ಎ.ಸಿ. ಹರಿಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.