ADVERTISEMENT

ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 1:21 IST
Last Updated 8 ಅಕ್ಟೋಬರ್ 2024, 1:21 IST
<div class="paragraphs"><p>ಮತ ಎಣಿಕೆ</p></div>

ಮತ ಎಣಿಕೆ

   

– ಪ್ರಜಾವಾಣಿ ಚಿತ್ರ

ನವದೆಹಲಿ: ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದೆ. ಈ ಫಲಿತಾಂಶವು ಮುಂಬರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗುವ ಸಾಧ್ಯತೆ ಇದೆ. 

ADVERTISEMENT

ಹರಿಯಾಣದಲ್ಲಿ ದಶಕದ ಬಳಿಕ ಅಧಿಕಾರದ ಗದ್ದುಗೆ ಏರುವ ಆಸೆಯಲ್ಲಿ ಕಾಂಗ್ರೆಸ್‌ ಪಾಳಯ ಇದೆ. ಕಮಲ ಪಾಳಯವು ಸತತ ಮೂರನೇ ಅವಧಿಗೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಹರಿಯಾಣದಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಸರ್ಕಾರ ರಚನೆಯ ಭರವಸೆಯಲ್ಲಿವೆ. ರಾಜ್ಯದಲ್ಲಿ ದಶಕದ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದೆ. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಆದರೆ, ಕಾಂಗ್ರೆಸ್‌–ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 

ಮೈತ್ರಿಕೂಟಕ್ಕೆ ಸೇರ್ಪಡೆಯಾಗುವಂತೆ ಪಿಡಿಪಿಯ ಮೆಹಬೂಬಾ ಮುಫ್ತಿ ಅವರಿಗೆ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ತಾರಿಕ್ ಅಹ್ಮದ್ ಕರ್ರಾ ಆಹ್ವಾನ ನೀಡಿದ್ದಾರೆ.

ಹರಿಯಾಣದಲ್ಲಿ ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್‌ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕರು ಲಾಬಿ ಆರಂಭಿಸಿದ್ದಾರೆ. ‘ನಾನು ದಣಿದಿಲ್ಲ ಹಾಗೂ ನಿವೃತ್ತಿಯಾಗಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ತಿಳಿಸಿದರು. ಈ ಮೂಲಕ ಮುಖ್ಯಮಂತ್ರಿಯಾಗಲು ಪ್ರಬಲ ಉಮೇದುವಾರ ಎಂಬ ಸಂದೇಶ ರವಾನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.