ADVERTISEMENT

ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧದ ಮಾನಹಾನಿ ಸುದ್ದಿಗೆ ಕೋರ್ಟ್ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 15:26 IST
Last Updated 28 ಆಗಸ್ಟ್ 2024, 15:26 IST
ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಮಾನಹಾನಿ ಆಗುವಂತಹ ಯಾವುದೇ ಸುದ್ದಿ ಅಥವಾ ವರದಿಗಳನ್ನು ವಕೀಲ ಕೆ.ಎನ್.ಜಗದೀಶ್, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಕಟಿಸುವುದಾಗಲೀ ಅಥವಾ ಬಿತ್ತರಿಸುವುದಾಗಲೀ ಮಾಡಬಾರದು’ ಎಂದು ನಗರದ ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಿದೆ.

ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಅಸಲು ದಾವೆಯ ಭಾಗವಾಗಿ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ನಗರದ 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಅವರು ಬುಧವಾರ ಈ ಕುರಿತಂತೆ ಆದೇಶಿಸಿದ್ದಾರೆ.

ಆದೇಶದಲ್ಲೇ‌ನಿದೆ?

‘ಪ್ರಕರಣದ ಪ್ರತಿವಾದಿಗಳು ಮತ್ತು ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ದಾವೆಯ ಮುಂದಿನ ವಿಚಾರಣೆಯವರೆಗೆ ದೂರುದಾರ ಬಸವರಾಜ ಬೊಮ್ಮಾಯಿ ಅವರ ಮಾನಹಾನಿಯುಂಟು ಮಾಡುವ ಯಾವುದೇ ಸುದ್ದಿಗಳನ್ನು ಪ್ರಸಾರ, ಪ್ರಕಟ ಮತ್ತು ಹಂಚಿಕೆ ಮಾಡಬಾರದು’ ಎಂದು ನ್ಯಾಯಾಧೀಶರು ಏಕಪಕ್ಷಕೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದ್ದಾರೆ.

ADVERTISEMENT

ಅಂತೆಯೇ, ‘ಬೊಮ್ಮಾಯಿ ಅವರ ಮಾನಹಾನಿ ಆಗುವಂತಹ ಅಂಶಗಳನ್ನೊಳಗೊಂಡ ಎರಡು ಪೋಸ್ಟ್‌ಗಳನ್ನು 24 ಗಂಟೆ ಒಳಗೆ ಅಳಿಸಿಹಾಕಬೇಕು’ ಎಂದು ಪ್ರಕರಣದ 48ನೇ ಪ್ರತಿವಾದಿಯಾದ ‘ಎಕ್ಸ್ ಕಾರ್ಪ್’ಗೆ (ಟ್ವಿಟರ್) ನ್ಯಾಯಾಧೀಶೆ ವಾಣಿ ಅವರು ನಿರ್ದೇಶಿಸಿದ್ದಾರೆ. ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಮತ್ತು ಸಮನ್ಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟಂಬರ್ 9ಕ್ಕೆ ಮುಂದೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.