ADVERTISEMENT

ವೈದ್ಯಕೀಯ ವರದಿ ಸಲ್ಲಿಸಲು ನಿರ್ದೇಶನ: ದರ್ಶನ್ ಜಾಮೀನು ಅರ್ಜಿ ವಿಚಾರಣೆ 28ಕ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:57 IST
Last Updated 22 ಅಕ್ಟೋಬರ್ 2024, 6:57 IST
<div class="paragraphs"><p>ದರ್ಶನ್</p></div>

ದರ್ಶನ್

   

ಬೆಂಗಳೂರು:"ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಸಲ್ಲಿಸಿ" ಎಂದು ಹೈಕೋರ್ಟ್, ಬಳ್ಳಾರಿ ಜೈಲು ಅಧಿಕಾರಿಗೆ ನಿರ್ದೇಶಿಸಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ದರ್ಶನ್‌ ಪರ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್‌, “ದರ್ಶನ್‌ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ಸಂಸ್ಥೆಯಲ್ಲಿ (ವಿಮ್ಸ್‌) ಸೋಮವಾರವಷ್ಟೇ (ಅ.21) ಎಂಆರ್‌ಐ ಸ್ಕ್ಯಾನ್‌ ಮಾಡಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವೆಂದು ತಿಳಿಸಿದ್ದಾರೆ. ಹೀಗಾಗಿ, ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಬೇಕು” ಎಂದು ಕೋರಿದರು.

ಇದನ್ನು ಆಲಿಸಿದ ನ್ಯಾಯಪೀಠ, "ದರ್ಶನ್‌ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಸಲ್ಲಿಸಿ" ಎಂದು ಬಳ್ಳಾರಿಯ ಕೇಂದ್ರ ಕಾರಾಗೃಹದ ಅಧಿಕಾರಿಗೆ ನಿರ್ದೇಶಿಸಿತು. ಅಂತೆಯೇ, ಆಕ್ಷೇಪಣೆ ಸಲ್ಲಿಸುವಂತೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿತು.

ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಲಾಗಿದೆ. ದರ್ಶನ್ ಪರ ಹೈಕೋರ್ಟ್ ವಕೀಲ ಎಸ್.ಸುನಿಲ್ ಕುಮಾರ್ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.