ADVERTISEMENT

ಅತ್ಯಾಚಾರ ಪ್ರಕರಣ: ಮುರುಘಾ ಶಿವಮೂರ್ತಿ ಶರಣರ ಬಿಡುಗಡೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 11:34 IST
Last Updated 15 ನವೆಂಬರ್ 2023, 11:34 IST
<div class="paragraphs"><p>ಶಿವಮೂರ್ತಿ ಮುರುಘಾ ಶರಣರು</p></div>

ಶಿವಮೂರ್ತಿ ಮುರುಘಾ ಶರಣರು

   

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಜೈಲಿನಿಂದ ಬಿಡುಗಡೆ ಮಾಡಲು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಇದೇ ವೇಳೆ, ಎರಡನೇ ಪೋಕ್ಸೊ ಪ್ರಕರಣದಲ್ಲಿ ಶರಣರ ವಿರುದ್ಧ ಹೊರಡಿಸಿದ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತನೆ ಮಾಡಬೇಕು ಎಂಬ ಸರ್ಕಾರಿ ವಕೀಲರ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನ.16ಕ್ಕೆ ಮುಂದೂಡಿದೆ.

ADVERTISEMENT

ಇಬ್ಬರು ಪ್ರೌಢಶಾಲ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್ ಈಚೆಗೆ ಜಾಮೀನು ನೀಡಿತ್ತು. ಜಾಮೀನು ಷರತ್ತು ಪೂರೈಸಲು ಶರಣರ ಪರ ವಕೀಲರು ಸೆಷನ್ಸ್ ನ್ಯಾಯಾಲಯದ ಮೊರೆಹೋಗಿದ್ದರು. ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ಪರಿಶೀಲಿಸಿದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಬಿಡುಗಡೆ ಆದೇಶ ನೀಡಿದರು.

ಎರಡನೇ ಪೋಕ್ಸೊ ಪ್ರಕರಣದಲ್ಲಿ ಶರಣರ ವಿರುದ್ಧ ಹೊರಡಿಸಿದ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನದ ಆದೇಶವಾಗಿ ಪರಿವರ್ತಿಸುವಂತೆ ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯಕ್ಕೆ ಶರಣರ ಪರ ವಕೀಲರು ಬುಧವಾರ ತಕರಾರು ಸಲ್ಲಿಸಿದರು. ವಾದ- ಪ್ರತಿವಾದಕ್ಕೆ ನ.16ಕ್ಕೆ ವಿಚಾರಣೆ ನಿಗದಿಪಡಿಸಿ ಕಲಾಪವನ್ನು ಮುಂದೂಡಲಾಯಿತು.

'ಶಿವಮೂರ್ತಿ ಮುರುಘಾ ಶರಣರಿಗೆ ಮೊದಲ ಪ್ರಕರಣದಲ್ಲಿ ನ್ಯಾಯಾಲಯ ಬಿಡುಗಡೆಗೆ ಆದೇಶ ನೀಡಿದೆ. ಆದೇಶ ಪ್ರತಿ ಸಂಜೆ ವೇಳೆಗೆ ಕಾರಾಗೃಹ ತಲುಪಿದರೆ ಬುಧವಾರವೇ ಬಿಡುಗಡೆ ಆಗಲಿದ್ದಾರೆ. ಎರಡನೇ ಪ್ರಕರಣದಲ್ಲಿ ಶರಣರನ್ನು ಬಂಧನ ಮಾಡದೇ ಇರುವುದರಿಂದ ಕಾರಾಗೃಹದಲ್ಲಿ ಇಟ್ಟುಕೊಳ್ಳುವಂತಿಲ್ಲ' ಎಂದು ಶರಣರ ಪರ ವಕೀಲ ಸಂದೀಪ್ ಪಾಟೀಲ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ಸರ್ಕಾರಿ ವಕೀಲ ಜಗದೀಶ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, 'ಎರಡನೇ ಪೋಕ್ಸೊ ಪ್ರಕರಣದ ಬಾಡಿ ವಾರೆಂಟ್ ವಿಚಾರಣೆ ನ್ಯಾಯಾಲಯಲ್ಲಿರುವುದರಿಂದ ಶರಣರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಜೈಲಿನಿಂದ‌ ಬಿಡುಗಡೆ ಮಾಡದಂತೆ ನಾವೂ ಕಾರಾಗೃಹಕ್ಕೆ ಮನವಿ ಮಾಡಿಕೊಳ್ಳಲಿದ್ದೇವೆ. ಅವರನ್ನು ಕಾರಾಗೃಹದಲ್ಲಿ ಇಡಲು ಕಾನೂನಿನಲ್ಲಿ ಅವಕಾಶ ಇದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.