ADVERTISEMENT

ಓಮೈಕ್ರಾನ್‌: ಮತ್ತಷ್ಟು ಮುನ್ನೆಚ್ಚರಿಕೆ ಅಗತ್ಯ

ತಜ್ಞರ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:59 IST
Last Updated 16 ಡಿಸೆಂಬರ್ 2021, 21:59 IST
   

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಐದು ಓಮೈಕ್ರಾನ್‌ ಸೋಂಕು ಪ್ರಕರಣಗಳು ಗುರುವಾರ ಪತ್ತೆಯಾಗಿರುವುದರಿಂದ, ಸೋಂಕಿತರನ್ನು ಪ್ರತ್ಯೇಕಿಸಿದರಷ್ಟೇ ಸಾಲದು, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತುರ್ತಾಗಿ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗುರುವಾರ ರೂಪಾಂತರಿ ತಳಿಯ ಸೋಂಕು ಪತ್ತೆಯಾಗಿರುವ ಐವರೂ ವಿಮಾನದಲ್ಲಿ ಪ್ರಯಾಣಿಸಿದವರು. ಅವರಲ್ಲಿ ಇಬ್ಬರು ಆಫ್ರಿಕಾ ಖಂಡಕ್ಕೆ ಹಾಗೂ ಒಬ್ಬರು ಬ್ರಿಟನ್‌ಗೆ ಪ್ರಯಾಣ ಬೆಳೆಸಿದ್ದವರು. ಇಬ್ಬರು ದೆಹಲಿಯಿಂದ ಬಂದವರು. ಇವರಷ್ಟೇ ಅಲ್ಲದೇ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ಓಮೈಕ್ರಾನ್‌ ವಾರ್ಡ್‌ನಲ್ಲಿರುವ 10 ಮಂದಿ ಈ ಸೋಂಕು ಹೊಂದಿರುವ ಶಂಕೆ ಇದೆ. ಅವರಿಂದ ಸಂಗ್ರಹಿಸಿರುವ ಮಾದರಿಯನ್ನು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್‌ ಸೀಕ್ವೆನ್ಸಿಂಗ್‌) ಕಳುಹಿಸಲಾಗಿದ್ದು, ಫಲಿತಾಂಶ ಇನ್ನೂ ಬಂದಿಲ್ಲ.

ಐದು ಹೊಸ ಪ್ರಕರಣಗಳು ಪತ್ತೆಯಾದರೂ ಗಾಬರಿ ಆಗಬೇಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸೋಂಕು ನಿಯಂತ್ರಣಕ್ಕೆ ಈಗ ಜಾರಿಯಲ್ಲಿರುವ ಸೋಂಕು ನಿಯಂತ್ರಣ ಕ್ರಮಗಳಲ್ಲೂ ಕೆಲವೊಂದು ಲೋಪಗಳಿರುವುದು ಕಂಡುಬಂದಿದೆ. ಸೋಂಕು ದೃಢಪಟ್ಟ 52 ವರ್ಷದ ವ್ಯಕ್ತಿಯು ನೈಜೀರಿಯಾದಿಂದ ಡಿ. 13ರಂದು ನಗರಕ್ಕೆ ಬಂದಿದ್ದರು. ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ವರದಿ ಬರುವ ಮುನ್ನವೇ ‌ಅಲ್ಲಿಂದ ಬೆಳಗಾವಿಗೆ ಹೋಗಲುಎರಡೇ ಗಂಟೆಯಲ್ಲಿ ಅನುಮತಿ ನೀಡಲಾಗಿತ್ತು. ಬಳಿಕ ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.

ತಾಂತ್ರಿಕ ಸಲಹಾ ಸಮಿತಿಯು ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಮಾದರಿ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವಂತೆ ಸಮಿತಿ ಶಿಫಾರಸು ಮಾಡಿದೆ. ರಾಜ್ಯ ಕೋವಿಡ್ ಕಾರ್ಯಪಡೆಯ ಸದಸ್ಯ ಡಾ.ಸಿ.ಎನ್‌.ಮಂಜುನಾಥ್‌ ಅವರ ಪ್ರಕಾರ, ಕೋವಿಡ್‌ನ ಮೊದಲ ಹಾಗೂ ಎರಡನೇ ಅಲೆ ಆರಂಭವಾದ ಕೆಲ ವಾರ ಮೊದಲು ಕಂಡುಬಂದ ಬೆಳವಣಿಗೆಗಳು ಮತ್ತೆ ಮರುಕಳಿಸುತ್ತಿವೆ. ‘ಡಿಸೆಂಬರ್‌ ಮತ್ತು ಫೆಬ್ರುವರಿ ನಡುವೆ ರೂಪಾಂತರ ತಳಿಗಳಿಂದ ಕೋವಿಡ್‌ ಹರಡುವುದು ಹೆಚ್ಚಳವಾಗಿತ್ತು’ ಎಂದು ಅವರು ತಿಳಿಸಿದರು.

ಕಳೆದ ವರ್ಷ ಬ್ರಿಟನ್‌ನಲ್ಲಿ ವೈರಾಣು (ಬಿ.1.1.7) ಕೂಡಾ 2020–21ರ ಚಳಿಗಾಲದಲ್ಲೇ ಕಾಣಿಸಿಕೊಂಡಿತ್ತು ಎಂಬುದನ್ನು ಅವರು ನೆನಪಿಸಿದರು. ‘ಈ ಸೋಂಕು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಸೀಮಿತವಾಗಿಲ್ಲ. ಇದು ಈಗಾಗಲೇ ಸಮುದಾಯದಲ್ಲಿ ಹರಡಿದೆ. ಹಾಗಾಗಿ ಒಳಾಂಗಣ‌ಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಜನ ಜಂಗುಳಿ ಉಂಟಾಗುವುದನ್ನು ನಿಯಂತ್ರಿಸಬೇಕು’ ಎಂದರು.

ವರದಿಗಳ ಪ್ರಕಾರ ಓಮೈಕ್ರಾನ್‌ ಪ್ರಕರಣಗಳು ಪ್ರಸ್ತುತ ಪ್ರತಿ 1.9 ದಿನಗಳಿಗೆ ದ್ವಿಗುಣಗೊಳ್ಳುತ್ತಿವೆ. ನವೆಂಬರ್‌ 30ರ ವೇಳೆಗೆ ಪ್ರತಿ 2.5 ದಿನಗಳಲ್ಲಿ ದ್ವಿಗುಣಗೊಳ್ಳುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.