ಬೆಂಗಳೂರು: ರಾಜ್ಯದಲ್ಲಿ ಮೂರು ಪ್ರತ್ಯೇಕ ಪ್ರಕರಣದಲ್ಲಿ ಶುಕ್ರವಾರ 23 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಬಿ.ನಾರಾಯಣಪುರದಲ್ಲಿ 7, ಕಲಬುರ್ಗಿಯ ಕಾಳಗಿಯಲ್ಲಿ 15 ಮತ್ತು ಮತ್ತು ದಾವಣಗೆರೆಯ ಸಾಸ್ವೆಹಳ್ಳಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಇತರ
ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.
ನಗರದ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಬಿ.ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 7 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಕೋವಿಡ್ ಪೀಡಿತರಾಗಿದ್ದಾರೆ. ಇಲ್ಲಿ 7 ದಿನ ಈ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಶಾಲೆಯಲ್ಲಿ 213 ವಿದ್ಯಾರ್ಥಿಗಳಿದ್ದು, ಮಾ.1 ಮತ್ತು ಮಾ.2ರಂದು ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ವರದಿ ಶುಕ್ರವಾರ ಬಂದಿದ್ದು, ಕೋವಿಡ್ ಪೀಡಿತರಾಗಿರುವ 7 ವಿದ್ಯಾರ್ಥಿಗಳಲ್ಲಿ 6 ಮಂದಿಯನ್ನು ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 66 ಮಂದಿ ನೇರ ಸಂಪರ್ಕಿತರು ಹಾಗೂ 53 ಮಂದಿ ಪರೋಕ್ಷ ಸಂಪರ್ಕಿತರನ್ನು ಗುರುತಿಸಲಾಗಿದೆ. ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಕುಟುಂಬ ಸದಸ್ಯರೂ ಸೇರಿದ್ದಾರೆ.
ರಾಜ್ಯದಲ್ಲಿ ಶಾಲೆಗಳು ಪುನರಾರಂಭವಾದ ಬಳಿಕ ಸೀಲ್ ಡೌನ್ ಆಗುತ್ತಿರುವ ಮೊದಲ ಶಾಲೆ ಇದಾಗಿದೆ. ಕೋವಿಡ್ ಪೀಡಿತರಾದವರಲ್ಲಿ ಎಲ್ಲ ವಿದ್ಯಾರ್ಥಿಗಳು 10ನೇ ತರಗತಿಯವರಾಗಿದ್ದು, ಅವರಲ್ಲಿ ರೋಗ ಲಕ್ಷಣಗಳು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಹನುಮಂತರಾಯ ಅವರು ವಿಸ್ತೃತ ವರದಿ ಸಲ್ಲಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಕಾಳಗಿ ಪ್ರಕರಣದಲ್ಲಿ ಸರ್ಕಾರಿ ಪ್ರೌಢಶಾಲೆಗೆ 15 ದಿನ ರಜೆ ಘೋಷಿಸಲಾಗಿದೆ. ‘ಮಾರ್ಚ್ 1ರಂದು 20 ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿ ಪಡೆಯಲಾಗಿತ್ತು. ಎಲ್ಲರಲ್ಲೂ ರೋಗ ಲಕ್ಷಣಗಳಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಕಾಳಗಿ ಸುತ್ತಮುತ್ತಲಿನ ತಾಂಡಾದ ನಿವಾಸಿಗಳು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದ್ದಾರೆ.
‘ಶುಕ್ರವಾರ ಶಾಲೆಯ 174 ಜನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಇದರ ಫಲಿತಾಂಶ ಶನಿವಾರ ಬರುವ ನಿರೀಕ್ಷೆ ಇದೆ’ ಎಂದು ಹೇಳಿದರು.
‘ಸಾಸ್ವೆಹಳ್ಳಿ ಕೆಪಿಎಸ್ ಶಾಲೆ ವಿದ್ಯಾರ್ಥಿಗೆ ಸೋಂಕು ದೃಢಪಟ್ಟ ಕಾರಣ ಸಹ ವಿದ್ಯಾರ್ಥಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಫಲಿತಾಂಶ ಬರುವವರೆಗೆ ರಜೆ ನೀಡಲಾಗಿದೆ’ ಎಂದು ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಇ.ರಾಜೀವ್ ತಿಳಿಸಿದ್ದಾರೆ.
ಬೆಂಗಳೂರಿನ ಪ್ರಕರಣದಲ್ಲಿ ಫೆ.26ರಂದು ಇಬ್ಬರು ಶಿಕ್ಷಕರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಪರೀಕ್ಷೆ ಬಳಿಕ ಅವರು ಕೋವಿಡ್ ಪೀಡಿತರಾಗಿರುವುದು ಮಾ.1ರಂದು ದೃಢಪಟ್ಟಿತ್ತು. ಬಳಿಕ ಮುಖ್ಯೋಪಾಧ್ಯಾಯರು 8, 9 ಮತ್ತು 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಸೂಚಿಸಿದ್ದರು.
‘ಶಾಲೆಯ ಕಟ್ಟಡ ಹಾಗೂ ಆವರಣವನ್ನು ಸೋಂಕು ನಿವಾರಕದಿಂದ ಸ್ವಚ್ಛಪಡಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿ, ಧೈರ್ಯ ಹೇಳಲಾಗಿದೆ. ಅವರಿಗೂ ಕೋವಿಡ್ ತಪಾಸಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ’ ಎಂದು ಡಿ. ಹನುಮಂತರಾಯ ತಿಳಿಸಿದ್ದಾರೆ.
ಉಚಿತ ಲಸಿಕೆ ನೀಡಿ
ವೈದ್ಯಕೀಯ ಸಂಘಟನೆಗಳ ಮನವಿ: ಖಾಸಗಿ ಆಸ್ಪತ್ರೆಗಳಲ್ಲಿಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ಲಸಿಕೆಗೆ ಕೇಂದ್ರ ಸರ್ಕಾರ ದರ ನಿಗದಿ ಮಾಡಿರುವುದಕ್ಕೆ ವೈದ್ಯಕೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಉಚಿತವಾಗಿ ಲಸಿಕೆ ನೀಡಲು ಆಗ್ರಹಿಸಿವೆ. ಭಾರತೀಯ ವೈದ್ಯಕೀಯ ಸಂಘವು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಗೆ ಉಚಿತವಾಗಿ ಲಸಿಕೆ ನೀಡಿ ಎಂದು ಮನವಿ ಮಾಡಿಕೊಂಡಿದೆ.
ರಾಜ್ಯದಲ್ಲಿ ಶುಕ್ರವಾರ 20,945 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇದರಲ್ಲಿ 12,521 ಮಂದಿ ಹಿರಿಯ ನಾಗರಿಕರಾಗಿದ್ದಾರೆ. 4,059 ಮಂದಿ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಶುಕ್ರವಾರ 677 ಪ್ರಕರಣಗಳು ವರದಿಯಾಗಿವೆ. ಕಳೆದ ಒಂದೂವರೆ ತಿಂಗಳಿನಲ್ಲಿ 24 ಗಂಟೆಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ಸೋಂಕಿತರ ಒಟ್ಟು ಸಂಖ್ಯೆ 9.53 ಲಕ್ಷ ದಾಟಿದೆ. ಒಂದು ವಾರದಿಂದ ಪ್ರಕರಣಗಳ ಸಂಖ್ಯೆ ನಿತ್ಯ 500ರ ಗಡಿ ದಾಟುತ್ತಿದ್ದು, ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಬೀದರ್, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 12,354ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 427 ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 9.35 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆ ಕಂಡಿದ್ದು, 6,374 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 112 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರೀಕ್ಷೆ ಹೆಚ್ಚಳ: ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಒಂದು ದಿನದ ಅವಧಿಯಲ್ಲಿ 78 ಸಾವಿರ ಪರೀಕ್ಷೆ ನಡೆಸಲಾಗಿದೆ. ಈವರೆಗೆ 1.91 ಕೋಟಿ ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಬ್ರಿಟನ್‌ನಿಂದ ಮತ್ತೆ 214 ಮಂದಿ ಬಂದಿದ್ದಾರೆ. ಕಳೆದ ನ.25ರ ಬಳಿಕ ಇಲ್ಲಿಗೆ ಬಂದವರ ಸಂಖ್ಯೆ 13,215ಕ್ಕೆ ತಲುಪಿದೆ. ಅವರಲ್ಲಿ ಈವರೆಗೆ 64 ಮಂದಿ ಕೋವಿಡ್ ಪೀಡಿತರಾಗಿದ್ದಾರೆ.
ಬೆಂಗಳೂರಿನಲ್ಲಿ 444 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 4.07 ಲಕ್ಷ ದಾಟಿದೆ. ಮೈಸೂರಿನಲ್ಲಿ 23, ಕಲಬುರ್ಗಿಯಲ್ಲಿ 37, ತುಮಕೂರಿನಲ್ಲಿ 28, ಉಡುಪಿಯಲ್ಲಿ 22, ದಕ್ಷಿಣ ಕನ್ನಡದಲ್ಲಿ 20 ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.