ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ಕರ್ತವ್ಯದ ವೇಳೆ ಗೈರಾಗುವುದನ್ನು ತಡೆಯಲು ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಸುವ ಯೋಜನೆಗೆ ಕೋವಿಡ್ ಅಡ್ಡಿಪಡಿಸಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿನ ಕೆಲ ವೈದ್ಯರು ಕರ್ತವ್ಯದ ವೇಳೆ ಗೈರಾಗುತ್ತಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿವೆ. ಅದೇ ರೀತಿ, ತಡವಾಗಿ ಆಸ್ಪತ್ರೆಗೆ ಬರುವುದು, ಮನೆಗೆ ಬೇಗ ತೆರಳುವುದು, ಸೇವಾ ಅವಧಿಯಲ್ಲಿ ವೈಯಕ್ತಿಕ ಕೆಲಸಗಳಲ್ಲಿ ನಿರತರಾಗಿರುವುದು ಹಾಗೂ ವಾರ್ಡ್‌ಗಳಿಗೆ ಹೋಗದಿರುವುದರ ಬಗ್ಗೆ ದೂರುಗಳಿವೆ. ಇದಕ್ಕೆ ಪರಿಹಾರ ಒದಗಿಸಲು ಆರೋಗ್ಯ ಇಲಾಖೆಯು 2019ರಲ್ಲಿ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಕೆಗೆ ಯೋಜನೆ ರೂಪಿಸಿತ್ತು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಕೋವಿಡ್‌ನಿಂದಾಗಿ ಇದು ನನೆಗುದಿಗೆ ಬಿದ್ದಿದೆ.
ಹಾಜರಾತಿಗೆ ಇರಿಸಲಾಗಿದ್ದ ಬಯೋಮೆಟ್ರಿಕ್ ವ್ಯವಸ್ಥೆಯನ್ನೂಕೋವಿಡ್ ಕಾರಣಕ್ಕೆ ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ವೈದ್ಯರ ಬರುವಿಕೆ ಮತ್ತು ಹೋಗುವಿಕೆಯ ಸಮಯ ಡಿಜಿಟಲ್ ರೂಪದಲ್ಲಿ ದಾಖಲೀಕರಣವಾಗುತ್ತಿಲ್ಲ. ಹೀಗಾಗಿ, ವೈದ್ಯರ ಹಾಜರಾತಿ ನಿರ್ವಹಣೆ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕ್ಷೇತ್ರ ಕಾರ್ಯಕ್ಕೂ ಯೋಜನೆ: ಜಿಯೋ ಫೆನ್ಸಿಂಗ್ ವ್ಯವಸ್ಥೆ ಅಡಿ ಕ್ಷೇತ್ರ ಕಾರ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಯನ್ನೂ ತರಲು ಯೋಜನೆ ರೂಪಿಸಲಾಗಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ‘ಆರೋಗ್ಯ ಮಿತ್ರ’ ಆ್ಯಪ್ ಮೂಲಕ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಮಾಹಿತಿಯನ್ನು ದಾಖಲೀಕರಿಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್‌ನಿಂದಾಗಿ ಬೆರಳಚ್ಚು ಹಾಗೂ ವಿವಿಧ ಮಾಹಿತಿಗಳನ್ನು ಪಡೆದು, ದಾಖಲೀಕರಿಸುವ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೋವಿಡ್ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದ ಬಳಿಕವೇ ಈ ವ್ಯವಸ್ಥೆಯನ್ನು ಅಳವಡಿಕೆ ಮಾಡಲು ಇಲಾಖೆ ನಿರ್ಧರಿಸಿದೆ.
‘2019–20ರಲ್ಲಿಯೇ ಜಿಯೋ ಫೆನ್ಸಿಂಗ್ ಅಳವಡಿಕೆಗೆ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಹೆಚ್ಚಿನ ಅನುದಾನ ಬೇಕಿರಲಿಲ್ಲ. ಆದರೆ, ಕಳೆದ ವರ್ಷ ಕೋವಿಡ್ ಕಾಣಿಸಿಕೊಂಡ ನಂತರ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಕೆ ಸಾಧ್ಯವಾಗಲಿಲ್ಲ’ ಎಂದು ಇಲಾಖೆಯ ಸಹಾಯಕ ಉಪನಿರ್ದೇಶಕ ಡಾ. ವಸಂತ್ ಕುಮಾರ್ ತಿಳಿಸಿದರು.
‘100 ಮೀ. ವ್ಯಾಪ್ತಿಯಲ್ಲಿ ನಿಗಾ’
‘ಜಿಯೋ ಫೆನ್ಸಿಂಗ್ ವ್ಯವಸ್ಥೆಯಿಂದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನಿರ್ದಿಷ್ಟ ಸ್ಥಳದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಸೇವಾ ಅವಧಿಯಲ್ಲಿ ಆಸ್ಪತ್ರೆಯಿಂದ ತೆರಳಿದಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ರವಾನೆಯಾಗುತ್ತದೆ. ಪ್ರತಿ ವ್ಯಕ್ತಿಗೆ 100 ಮೀ. ವ್ಯಾಪ್ತಿ ಗುರುತಿಸಲಾಗುತ್ತದೆ. ಅದರಾಚೆಗೆ ಹೋದಲ್ಲಿ ಅವರು ಕರ್ತವ್ಯದಲ್ಲಿಲ್ಲ ಎಂದು ಪರಿಗಣಿಸಬೇಕಾಗುತ್ತದೆ’ ಎಂದು ಡಾ. ವಸಂತ್ ಕುಮಾರ್ ವಿವರಿಸಿದರು.
ಏನಿದು ಜಿಯೋ ಫೆನ್ಸಿಂಗ್?
ಇದು ಜಿಪಿಎಸ್, ಆರ್‌ಎಫ್‌ಐಡಿ ಅಥವಾ ವೈಫೈ ಮೂಲಕ ಕಾರ್ಯನಿರ್ವಹಿಸುತ್ತದೆ. ತಂತ್ರಾಂಶ ಅಥವಾ ಆ್ಯಪ್ ಮೂಲಕ ಇದನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ವ್ಯಕ್ತಿ ಕಾರ್ಯನಿರ್ವಹಿಸುವ ನಿರ್ದಿಷ್ಟ ಸ್ಥಳದಲ್ಲಿ ವರ್ಚುವಲ್ ಬೇಲಿ ನಿರ್ಮಾಣ ಮಾಡಲಾಗುತ್ತದೆ. ನಿಗದಿತ ಸಾಧನ ಅಥವಾ ಆ್ಯಪ್ ಹೊಂದಿರುವ ವ್ಯಕ್ತಿ ಗಡಿಯೊಳಗೆ ಬಂದಾಗ ಮತ್ತು ಹೊರನಡೆದಾಗ ಗೊತ್ತುಪಡಿಸಿದ ಮೇಲ್ವಿಚಾರಕರಿಗೆ ಸಂದೇಶ ರವಾನೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.