ADVERTISEMENT

Covid-19: ಒಳಾಂಗಣದಲ್ಲಿ ಮಾಸ್ಕ್‌; ಜ್ವರ, ಕೆಮ್ಮು ಇದ್ದವರಿಗೆ ಪರೀಕ್ಷೆ ಕಡ್ಡಾಯ

ಜ್ವರ, ಕೆಮ್ಮು ಇದ್ದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 22:15 IST
Last Updated 22 ಡಿಸೆಂಬರ್ 2022, 22:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಬೇರೆ ದೇಶಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ ಹಾಗೂ ಹೊಸ ರೂಪಾಂತರಿ ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ಜ್ವರ, ಕೆಮ್ಮು, ಶೀತ ಇತ್ಯಾದಿ ಲಕ್ಷಣ (ಐಎಲ್‌ಐ ಮತ್ತು ಸಾರಿ ಸಮಸ್ಯೆ) ಇರುವವರಿಗೆ ಕಡ್ಡಾಯವಾಗಿ ಕೋವಿಡ್‌ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿಯಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಕೋವಿಡ್‌ ತಪಾಸಣೆ ಪ್ರಮಾಣ ಹೆಚ್ಚಿಸಲು ಮತ್ತು ಒಳಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುವುದು’ ಎಂದರು.

ADVERTISEMENT

‘ವಿಮಾನ ನಿಲ್ದಾಣದಲ್ಲಿ ಶೇ 2ರಷ್ಟು ರ‍್ಯಾಂಡಮ್‌ ತಪಾಸಣೆ, ಜಿಲ್ಲಾಸ್ಪತ್ರೆ, ತಾಲ್ಲೂಕು ಕೇಂದ್ರ ಸಹಿತ ವಿವಿಧೆಡೆ ಇರುವ ಆಕ್ಸಿಜನ್ ಘಟಕಗಳನ್ನು ಪರಿಶೀಲಿಸಿ, ಕಾರ್ಯನಿರ್ವಹಿಸುವಂತೆಮಾಡಬೇಕು. ಕೋವಿಡ್ ರೋಗಿಗಳಿಗಾಗಿ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಲು ಕೂಡಾ ನಿರ್ಧರಿಸಲಾಗಿದೆ’ ಎಂದರು.

‘ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಜತೆಗೂ ಮಾತುಕತೆ ನಡೆಸಿ, ನಿರ್ದಿಷ್ಟ ಪ್ರಮಾಣದ ಹಾಸಿಗೆಗಳನ್ನು ಮೀಸಲಿಡಲು ಸೂಚಿಸಲಾಗುವುದು. ಶೇ 80ರಷ್ಟು ಜನರು ಇನ್ನೂ ಬೂಸ್ಟರ್ ಡೋಸ್ ಹಾಕಿಸಿಕೊಂಡಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಬೂಸ್ಟರ್ ಡೋಸ್ ಹಾಕಿಸಲು ವಿಶೇಷ ಕ್ಯಾಂಪ್ ಮಾಡಲು ಮತ್ತು ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಲಸಿಕೆ ದಾಸ್ತಾನು ಇರುವಂತೆ ನೋಡಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ವಿವರಿಸಿದರು.

ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಮತ್ತು ಕಾಂಗ್ರೆಸ್‍ನ ಯತೀಂದ್ರ ಸಿದ್ದರಾಮಯ್ಯ, ‘ಹೊರ ದೇಶಗಳಿಂದ ಬರುವ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಬೇಕು. ಅವರಿಂದಾಗಿ ಇಲ್ಲಿಯವರಿಗೆ ಸಮಸ್ಯೆ ಆಗಬಾರದು. ವಿಮಾನ ನಿಲ್ದಾಣದಲ್ಲಿ ಶೇ 2ರಷ್ಟು ಜನರನ್ನು ಮಾತ್ರ ರ‍್ಯಾಂಡಮ್‌ ಆಗಿ ತಪಾಸಣೆ ನಡೆಸುವ ಬದಲು, ಎಲ್ಲರನ್ನೂ ತಪಾಸಣೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

ಕಲಾಪಕ್ಕೆ ಮತ್ತೆ ‘ಮಾಸ್ಕ್’:
ವಿಧಾನಮಂಡಲ ಕಲಾಪದಲ್ಲಿ ಭಾಗಿಯಾಗಿರುವವರು ಮಾಸ್ಕ್ ಧರಿಸಿ ಬರುವುದು ಸೂಕ್ತ ಎಂಬ ಸಲಹೆ ಸದಸ್ಯರಿಂದ ಬಂತು.

ಇಂದು ಸಭೆ (ನವದೆಹಲಿ ವರದಿ): ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಕೋವಿಡ್‌ ನಿಯಂತ್ರಣ ಸಂಬಂಧ ಶುಕ್ರವಾರ ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.