ADVERTISEMENT

ಸಚಿವರು, ಶಾಸಕರ ಶೇ 30 ರಷ್ಟು ವೇತನ, ಭತ್ಯೆ ಕಡಿತ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 21:14 IST
Last Updated 9 ಏಪ್ರಿಲ್ 2020, 21:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಪರಿಹಾರ ನಿಧಿಗಾಗಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ವೇತನ ಮತ್ತು ಭತ್ಯೆಯಲ್ಲಿ ಶೇ 30 ರಷ್ಟು ಕಡಿತ ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ವಿಧಾನಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿ ಮತ್ತು ಉಪಸಭಾಪತಿಯವರ ವೇತನ ಕಡಿತ ಮಾಡಲಾಗುವುದು. ಈ ಏಪ್ರಿಲ್‌ನಿಂದ ಮುಂದಿನ ವರ್ಷದ ಮಾರ್ಚ್‌ವರೆಗೆ ವೇತನ ಮತ್ತು ಭತ್ಯೆಯಲ್ಲಿ ಕಡಿತ ಮಾಡಲಾಗುವುದು.ಇದಕ್ಕಾಗಿ ಕರ್ನಾಟಕ ವಿಧಾನಸಭಾ ಸದಸ್ಯರು, ವಿಧಾನಪರಿಷತ್‌ ಸದಸ್ಯರು, ಸಚಿವರ ಸಂಬಳಗಳ ಅಧಿನಿಯಮ 1956 ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ ಎಂದರು.

ಒಬ್ಬರು ಶಾಸಕರ ತಿಂಗಳ ವೇತನ ₹25,000 ಇದೆ. ಅದಕ್ಕೆ ಕ್ಷೇತ್ರ ಭತ್ಯೆ ₹40,000, ಕ್ಷೇತ್ರ ಪ್ರವಾಸ ಭತ್ಯೆ ₹40,000, ಪಿಎ/ರೂಂ ಬಾಯ್‌ ಅಲೋಯನ್ಸ್‌ ₹10,000, ದೂರವಾಣಿ ಭತ್ಯೆ ₹20,000, ಅಂಚೆ ಮತ್ತು ಸ್ಟೇಷನರಿ ಭತ್ಯೆ ₹5,000 ಇರುತ್ತದೆ. ಹೀಗೆ ಒಟ್ಟು ಮೊತ್ತ ₹1.40 ಲಕ್ಷ ಆಗುತ್ತದೆ.

ADVERTISEMENT

ಒಬ್ಬರು ಸಚಿವರ ವೇತನ ₹40,000, ವಿವಿಧ ಭತ್ಯೆಗಳು ಸೇರಿ ₹ 3 ಲಕ್ಷ, ಮನೆ ಬಾಡಿಗೆ ₹80,000 ಮತ್ತು 1 ಸಾವಿರ ಲೀಟರ್‌ ಡೀಸೆಲ್‌/ ಪೆಟ್ರೋಲ್‌ ಭತ್ಯೆ ನೀಡಲಾಗುತ್ತದೆ. ಪೆಟ್ರೋಲ್ ಹಾಗೂ ಪ್ರವಾಸ ಭತ್ಯೆ ಬಿಟ್ಟು ಉಳಿದ ಮೊತ್ತದಲ್ಲಿ ಶೇ 30ರಷ್ಟು ಕಡಿತ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.