ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ 24 ಗಂಟೆಗಳ ಅವಧಿಯಲ್ಲಿ ದುಪ್ಪಟ್ಟಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ 2,053 ಸೇರಿದಂತೆ ರಾಜ್ಯದಲ್ಲಿ 2,479 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕು ದೃಢ ಪ್ರಮಾಣ ಶೇ 2.59ಕ್ಕೆ ಏರಿಕೆಯಾಗಿದೆ.
ಆರು ತಿಂಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. 2021ರ ಜು.8ರಂದು 2,530 ಪ್ರಕರಣಗಳು ಖಚಿತಪಟ್ಟಿದ್ದವು. ಬಳಿಕ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು. ಈಗ ವಾರದಿಂದ ಏರುಗತಿ ಪಡೆದುಕೊಂಡಿದೆ. ವರದಿಯಾಗುತ್ತಿರುವ ಒಟ್ಟು ಪ್ರಕರಣಗಳಲ್ಲಿ ಶೇ 90 ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ದೃಢಪಡುತ್ತಿವೆ.
ಒಂದು ದಿನದ ಅವಧಿಯಲ್ಲಿ 95 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.ರಾಜ್ಯದ 29 ಜಿಲ್ಲೆಗಳಲ್ಲಿಕೋವಿಡ್ ಪ್ರಕರಣಗಳು ಹೊಸದಾಗಿಪತ್ತೆಯಾಗಿವೆ. 12ಜಿಲ್ಲೆಗಳಲ್ಲಿಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ, 16ಜಿಲ್ಲೆಗಳಲ್ಲಿಒಂದಂಕಿಯಲ್ಲಿದೆ. ಹಾವೇರಿಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ.
ದಕ್ಷಿಣ ಕನ್ನಡದಲ್ಲಿ 75,ಉಡುಪಿಯಲ್ಲಿ 72, ಮೈಸೂರಿನಲ್ಲಿ 48, ಬೆಳಗಾವಿಯಲ್ಲಿ 45 ಹಾಗೂ ಧಾರವಾಡದಲ್ಲಿ 29 ಪ್ರಕರಣಗಳು ವರದಿಯಾಗಿವೆ.ಉಳಿದಜಿಲ್ಲೆಗಳಲ್ಲಿಹೊಸ ಪ್ರಕರಣಗಳು 20ಕ್ಕಿಂತ ಕಡಿಮೆ ಇವೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 30.13 ಲಕ್ಷ ದಾಟಿದೆ.
ಸೋಂಕಿತರಲ್ಲಿ 288 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 29.61 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, 13,532 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ 11,423 ಸಕ್ರಿಯ ಪ್ರಕರಣಗಳಿವೆ. ದಕ್ಷಿಣ ಕನ್ನಡ ಸೇರಿದಂತೆ 8 ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರಿದ್ದಾರೆ.
ಕೋವಿಡ್ಪೀಡಿತರಲ್ಲಿ ಬೆಂಗಳೂರಿನಲ್ಲಿ ಮೂವರು ಹಾಗೂ ದಕ್ಷಿಣ ಕನ್ನಡದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 0.16 ರಷ್ಟು ಇದೆ. ಈವರೆಗೆಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 38,355ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.