ADVERTISEMENT

ನಂಜನಗೂಡಿನಲ್ಲಿ ಒಬ್ಬನಿಂದ 49 ಮಂದಿಗೆ ಕೋವಿಡ್-19 ಸೋಂಕು: ಮೂಲ ಇನ್ನೂ ನಿಗೂಢ

ನಿರಂಜನ ಕಗ್ಗೆರೆ
Published 17 ಏಪ್ರಿಲ್ 2020, 9:27 IST
Last Updated 17 ಏಪ್ರಿಲ್ 2020, 9:27 IST
   

ಮೈಸೂರು: ಕೋವಿಡ್‌–19 ಸೋಂಕು ಪ್ರಕರಣಗಳು ಹೆಚ್ಚಾಗಿವರದಿಯಾಗುತ್ತಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲಿಯೆಂಟ್ ಔಷಧಿ ತಯಾರಿಕಾ ಕಂಪೆನಿಯ ಅಧಿಕಾರಿಗಳು, ತಮ್ಮ ಸಂಸ್ಥೆಯ ಯಾವೊಬ್ಬ ನೌಕರನೂ ಕಳೆದ ಆರು ತಿಂಗಳುಗಳಲ್ಲಿ ವಿದೇಶ ಪ್ರವಾಸ ಕೈಗೊಂಡಿಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ನೋಯ್ಡಾ ಮೂಲದಈ ಕಂಪೆನಿಯ ಉದ್ಯೋಗಿಗೆ (ರೋಗಿ ಸಂಖ್ಯೆ 52ರ ವ್ಯಕ್ತಿ)ಸೋಂಕು ತಗುಲಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಮತ್ತಷ್ಟು ಕಗ್ಗಂಟಾಗತೊಡಗಿದೆ. ಮಾತ್ರವಲ್ಲದೆಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ.

ಮೈಸೂರು ಜಿಲ್ಲೆಯಲ್ಲಿ ಸೋಂಕಿನ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿರುವನಂಜನಗೂಡಿನಲ್ಲಿ ಸೋಂಕು ಪತ್ತೆಯಾಗಿ 25 ದಿನಗಳು ಕಳೆದಿದ್ದರೂ ನಿಖರ ಕಾರಣ ತಿಳಿಯಲು ಜಿಲ್ಲಾಡಳಿತ ವಿಫವಾಗಿದೆ. ಆದರೆ, ಮಾಧ್ಯಮಗಳು ಮತ್ತು ರಾಜಕೀಯ ನಾಯಕರಿಂದ ಈ ಸಂಬಂಧ ಪ್ರಶ್ನೆಗಳು ಎದುರಾಗುತ್ತಿರುವುದರಿಂದ, ‘ಚೀನಾದಿಂದ ಆಮದು ಮಾಡಿಕೊಳ್ಳಲಾಗಿರುವ ಕಾರ್ಡ್‌ಬೋರ್ಡ್‌ನಿಂದಾಗಿ ಸೋಂಕು ತಗುಲಿರಬಹುದು’ ಎಂದು ಮತ್ತೆಮತ್ತೆ ಹೇಳುತ್ತಿದೆ.

ADVERTISEMENT

ಆದಾಗ್ಯೂ ಕಂಪೆನಿ ತನ್ನ ಹೇಳಿಕೆಯಲ್ಲಿ, ‘ಚೀನಾದಿಂದ ಆಮದು ಮಾಡಿಕೊಳ್ಳಲಾಗಿರುವ ಕಚ್ಚಾ ಸಾಮಗ್ರಿಗಳ ಬಗ್ಗೆ ಮಾಧ್ಯಮ ಮತ್ತು ಸಾರ್ವಜನಿಕರಲ್ಲಿ ತಪ್ಪು ಗ್ರಹಿಕೆ ಸೃಷ್ಟಿಯಾಗಿರುವುದು ದುರದೃಷ್ಟಕರ’ಎಂದಿದೆ. ಮುಂದುವರಿದು, ‘ಕೋವಿಡ್‌–19 ಸೋಂಕಿತ (ಪೇಷೆಂಟ್‌ ನಂ.52) ಚೀನಾ ಅಥವಾ ಬೇರೆ ಯಾವುದೇ ದೇಶಕ್ಕೆ ಭೇಟಿ ನೀಡಿಲ್ಲ. ಮಾತ್ರವಲ್ಲದೆ, ಸೋಂಕಿತರಲ್ಲಿ ಯಾವೊಬ್ಬ ನೌಕರನೂ ಕಳೆದ ಆರು ತಿಂಗಳುಗಳಲ್ಲಿ ವಿದೇಶ ಪ್ರವಾಸ ಕೈಗೊಂಡಿಲ್ಲ’ ಎಂದೂ ಹೇಳಿದೆ.

ತನ್ನ ಈ ಹೇಳಿಕೆಗೆ ಜಿಲ್ಲಾಡಳಿತ ನೀಡಬಹುದಾದ ಸಂಭವನೀಯ ಉತ್ತರಕ್ಕೂ ಪ್ರತಿಕ್ರಿಯಿಸಿರುವ ಕಂಪೆನಿ, ‘ಜಾಗತಿಕ ಸಂಸ್ಥೆಗಳು ಇಲ್ಲಿಯವರೆಗೆ ಪ್ರಕಟಿಸಿರುವ ಹಾಗೂ ಲಭ್ಯವಿರುವ ವೈಜ್ಞಾನಿಕ ಸಾಕ್ಷ್ಯಗಳ ಪ್ರಕಾರ ಕೊರೊನಾವೈರಸ್‌ ಯಾವುದೇ ಮೇಲ್ಮೈನಲ್ಲಿ 72 ಗಂಟೆಗಳಿಗಿಂತ ಹೆಚ್ಚು ಸಮಯ ಬದುಕಿರಲಾರದು. ನಂಜನಗೂಡಿಗೆ ಆಮದು ಮಾಡಿಕೊಳ್ಳಲಾಗಿರುವ ಕಚ್ಚಾ ವಸ್ತುಗಳನ್ನು ಸಮುದ್ರ ಮಾರ್ಗವಾಗಿ ತರಲು ಕನಿಷ್ಠ ಮೂರು ವಾರಗಳು ಬೇಕಾಗುತ್ತವೆ. ಅಷ್ಟು ಸಮಯ ವೈರಸ್‌ ಉಳಿಯಲಾರದು’ ಎಂದು ಒತ್ತಿ ಹೇಳಿದೆ.

‘ಕೋವಿಡ್‌–19 ಸೋಂಕಿತ 52ನೇ ಸಂಖ್ಯೆಯ ರೋಗಿಯು ಕಚ್ಚಾ ಸಾಮಗ್ರಿಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಕಚ್ಚಾ ವಸ್ತು ಸ್ವೀಕರಿಸುವ, ಸಾಗಿಸುವ, ಸಂಗ್ರಹಿಸುವ ಅಥವಾ ಅದನ್ನು ನಿರ್ವಹಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿರಲಿಲ್ಲ’ ಎಂದೂ ಕಂಪೆನಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 49 ಜನರಿಗೆ ಕೋವಿಡ್‌–19 ಸೋಂಕು ತಗುಲು ಈ ವ್ಯಕ್ತಿಯೇ ಕಾರಣ ಎಂದು ಪಡಿಗಣಿಸಲಾಗಿದೆ. ದೆಹಲಿಯ ತಬ್ಲಿಗಿ ಜಮಾತ್‌ಗೆ ಹೋಗಿ ಬಂದವರಿಂದರಿಂದಲೂ ಕರ್ನಾಟಕದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ರೋಗಿಯನ್ನೂ ಅವರೊಂದಿಗೆ ಹೋಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.