ADVERTISEMENT

COVID Scam | ತನಿಖೆ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಸಚಿವ ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 14:34 IST
Last Updated 10 ನವೆಂಬರ್ 2024, 14:34 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: ‘ಕೋವಿಡ್‌ ಹಗರಣದ ತನಿಖೆ ವಿಚಾರದಲ್ಲಿ ನಮಗೆ ಯಾವುದೇ ರಾಜಕೀಯ ಉದ್ದೇಶ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. 

‘ಯಡಿಯೂರಪ್ಪ ಅವರನ್ನು ಗುರಿ ಮಾಡಲಾಗುತ್ತಿದೆ’ ಎಂಬ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಕೋವಿಡ್ ಹಗರಣದ ತನಿಖೆ ನಡೆಯುತ್ತಿದೆ ಅಷ್ಟೇ. ಭ್ರಷ್ಟಾಚಾರ ನಡೆದಿದೆ ಎಂದು ನಿವೃತ್ತ ನ್ಯಾಯಮೂರ್ತಿ ಡಿಕುನ್ಹಾ ಆಯೋಗ ಮಧ್ಯಂತರ ವರದಿಯಲ್ಲಿ ಹೇಳಿದೆ. ಈ ವಿಚಾರದ ಪರಾಮರ್ಶೆಗೆ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯ ವರದಿಯನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು, ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

‘ಬಿಟ್ ಕಾಯಿನ್ ಪ್ರಕರಣದ ತನಿಖೆ ಇನ್ನೂ ಪೂರ್ಣ ಆಗಿಲ್ಲ. ದೋಷಾರೋಪಣೆ ಪಟ್ಟಿ ಸಲ್ಲಿಸಿಲ್ಲ’ ಎಂದೂ ಪರಮೇಶ್ವರ ಸ್ಪಷ್ಟಪಡಿಸಿದರು.

ADVERTISEMENT

ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್​ನವರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ವಿಚಾರ ಮಾತನಾಡುವುದಾದರೂ ಸ್ಪಷ್ಟ ಮಾಹಿತಿ ಇರಬೇಕು. ನಾನು ಯಾವ ಹೇಳಿಕೆಯನ್ನೂ ಗಮನಿಸಿಲ್ಲ’ ಎಂದರು.

ಕಾನೂನುಬಾಹಿರ ಅಲ್ಲವೇ?: ‘ಎರಡು ವರ್ಷದ ಹಳೆಯ ಘಟನೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿರುವುದು ಗೊತ್ತಾದ ಮೇಲೆ ಎಫ್ಐಆರ್ ಮಾಡಲಾಗಿದೆ. ಈಗಿನ ಭೂಮಿಯನ್ನು ವಕ್ಫ್​ಗೆ ತೆಗೆದುಕೊಂಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅದು ಕಾನೂನುಬಾಹಿರ ಅಲ್ಲವೇ? ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ಅದನ್ನು ರಾಜಕೀಯ ಮಾಡುತ್ತಾರೆಂದು ಆಪಾದಿಸುತ್ತಾರೆ. ಹೀಗಾದರೆ, ಸರ್ಕಾರ ಕೆಲಸ ಮಾಡಬೇಕಲ್ಲವೇ’ ಎಂದೂ ಪ್ರಶ್ನಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಮಾಡಿರುವ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ನರೇಂದ್ರ ಮೋದಿ ಅವರು ದೇಶದ ಪ್ರಧಾನಿ. ಅವರ ಬಗ್ಗೆ ನಾವು ಎಚ್ಚರದಿಂದಿರಬೇಕು. ಅವರು ಕೂಡ ಎಚ್ಚರದಿಂದ ಮಾತನಾಡಬೇಕು. ಅಬಕಾರಿ ಇಲಾಖೆ ಭ್ರಷ್ಟಾಚಾರ ಆರೋಪದ ಬಗ್ಗೆ ಸ್ಪಷ್ಟಪಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.