ಬೆಳಗಾವಿ: ‘ಕೋವಿಡ್–19 ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅವರ ವಿರುದ್ಧ ಟೀಕೆ ಮಾಡುವ ಮೂಲಕ ರಾಜಕೀಯಗೊಳಿಸಬಾರದು’ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೋರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನೆರೆಯ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ದೇವೇಂದ್ರ ಫಡ್ನವೀಸ್ ಅವರು ಅಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಶಂಶಿಸಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರು ಕೂಡ ಸರ್ಕಾರಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು. ‘ಕೋವಿಡ್–19 ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮಗಳನ್ನು ವಿವಿಧ ರಾಷ್ಟ್ರಗಳು ಪ್ರಶಂಶಿಸುತ್ತಿದ್ದರೆ, ಸ್ಥಳೀಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ದುರ್ದೈವ’ ಎಂದು ವಿಷಾದ ವ್ಯಕ್ತಪಡಿಸಿದರು.
‘ದೇಶದ 80 ಕೋಟಿ ಜನರಿಗೆ ಅಕ್ಕಿ, ಬೇಳೆ ನೀಡುವ ನಿರ್ಧಾರವನ್ನು ಮೋದಿಯವರು ಕೈಗೊಂಡಿದ್ದಾರೆ. ಸ್ವಗ್ರಾಮಗಳಿಗೆ ವಾಪಸ್ಸಾಗಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಎಲ್ಲ ವರ್ಗದ ಜನರನ್ನು ಒಳಗೊಂಡಂತೆ ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.