ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಶೇ 83ರಷ್ಟು ಅಂದರೆ, 4.15 ಕೋಟಿ ಜನರಿಗೆ ಕೋವಿಡ್–19 ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, 2.05 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಆದರೆ, ಮೂರನೇ ಡೋಸ್ ನೀಡುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮಲ್ಲೇಶ್ವರದ ಕಬಡ್ಡಿ ಮೈದಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಶ್ರಮ ಮತ್ತು ನಾಗರಿಕರ ಸಹಕಾರದಿಂದ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮುಂದುವರಿದ ದೇಶಗಳಲ್ಲಿ ಶೇ 20ರಷ್ಟು ಲಸಿಕೆ ನೀಡಲೂ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.
ಮೂರನೇ ಡೋಸ್ ಲಸಿಕೆ ನೀಡುವ ಸಂಬಂಧ ತಜ್ಞರು ಸಲಹೆಯನ್ನು ನೀಡಿಲ್ಲವಾದ ಕಾರಣ, ಅದರ ಪ್ರಶ್ನೆಯೇ ಉದ್ಭವಿಸುವುದಿಲ್ಲ. ದೇಹದಲ್ಲಿ ನ್ಯೂಟ್ರಲೈಸ್ ಪ್ರತಿಕಾಯ ಕಡಿಮೆಯಾಗಿಲ್ಲ. ಹೀಗಾಗಿ ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಲಸಿಕೆಯ ಉತ್ಪಾದನೆ ಮತ್ತು ಅದನ್ನು ಜನರಿಗೆ ನೀಡುವ ವಿಚಾರದಲ್ಲಿ ಭಾರತವು ಇತರ ದೇಶಗಳು ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಕೆಲಸ ಮಾಡಿದೆ. ಕೋವಿಡ್ ನಿಯಂತ್ರಕ್ಕೆ ಲಸಿಕೆ ಪ್ರಬಲ ಅಸ್ತ್ರವಾಗಿದ್ದು, ಅದನ್ನು ಎಲ್ಲರಿಗೂ ನೀಡುವ ಕೆಲಸ ಆಗಿದೆ ಎಂದು ಸಚಿವರು ಹೇಳಿದರು.
ದೇಶದಲ್ಲಿ 365 ದಿನ 24 ಗಂಟೆ ಲಸಿಕೆ ನೀಡುವ ಕೆಲಸ ಆಗಿದ್ದು, ಎಲ್ಲಿಯೂ ಕೊರತೆ ಆಗಿಲ್ಲ. ಇಷ್ಟು ಲಸಿಕೆಯನ್ನು ಉಚಿತವಾಗಿ ನೀಡಿರುವ ದೇಶ ಭಾರತ ಮಾತ್ರ. ರಾಜ್ಯದಲ್ಲಿ ಈಗ ಮನೆ ಮನೆಗೆ ಹೋಗಿ ಲಸಿಕೆ ನೀಡಲಾಗುತ್ತಿದೆ ಎಂದರು.
ಲಸಿಕೆ ನೀಡಿಕೆಯಲ್ಲಿ ದೀನ ದಲಿತರು, ಅವಕಾಶ ವಂಚಿತರಿಗೆ ಮೊದಲ ಆದ್ಯತೆ ನೀಡಿದ್ದೇವೆ. ಎಲ್ಲ ಜನರಿಗೂ ಯಾವುದೇ ತಾರತಮ್ಯವಿಲ್ಲದೇ ಲಸಿಕೆ ನೀಡಲಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ಮಾಸ್ಕ್, ವೆಂಟಿಲೇಟರ್, ಆಮ್ಲಜನಕ, ಬೆಡ್‌ಗಳು ಸೇರಿದಂತೆ ಅನೇಕ ಸವಾಲುಗಳು ದೇಶದ ಮುಂದಿದ್ದವು. ಈ ಸವಾಲುಗಳನ್ನು ದೇಶವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸ್ಪಂದಿಸಿದೆ ಎಂದರು.
ಇತರ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ ಕನಿಷ್ಠ ಸೋಂಕಿತರು, ಅತ್ಯಂತ ಕಡಿಮೆ ಸಾವಿನ ಪ್ರಮಾಣ ನಮ್ಮ ದೇಶದ್ದಾಗಿತ್ತು ಎಂದು ವಿವರಿಸಿದರು. ಭರವಸೆಯ ನಾಡು ನಮ್ಮದು, ಭಾರತ ಭರವಸೆಯ ದೇಶ ಎಂಬುದು ಇದರಿಂದ ಸಾಬೀತಾಗಿದೆ. ವಿಶ್ವಗುರುವಾಗುವತ್ತ ನಮ್ಮ ದೇಶ ಮುನ್ನಡೆಯುತ್ತಿದೆ ಎಂದು ಹೇಳಿದರು.
ಮಳೆ ನಿಂತ ಕೂಡಲೇ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. 3 ಜನ ವೈದ್ಯರು ಮತ್ತು ಇಬ್ಬರು ಪೌರಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.