ಬೆಂಗಳೂರು: ಕಲಬುರ್ಗಿಯ ನಿಗದಿತ ಆಸ್ಪತ್ರೆಯಲ್ಲಿ ಮಂಗಳವಾರ 65 ವರ್ಷದ ವೃದ್ಧರೊಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಕೋವಿಡ್–19 ಪಿಡುಗಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿದೆ.
‘ಕಲಬುರ್ಗಿಯಲ್ಲಿ ರಸ್ತೆ ಬದಿಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಈ ವ್ಯಕ್ತಿಯನ್ನು ಎರಡು ದಿನ ಖಾಸಗಿ ಆಸ್ಪತ್ರೆಯಲ್ಲೇ ಇಟ್ಟು ಮಂಗಳವಾರ
ವಷ್ಟೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆ ಚಿಕಿತ್ಸೆ ವಿಳಂಬ ಮಾಡಿದ್ದರಿಂದ ರೋಗಿ ಸಾಯುವಂತಾಯಿತು. ಇದಕ್ಕಾಗಿ ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಹಾಗೂ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಈ ವ್ಯಕ್ತಿಯ ಸಂಪರ್ಕದ ಕಾರಣ ಆಸ್ಪತ್ರೆಯಲ್ಲಿದ್ದ ಎಲ್ಲಾ 20 ಮಂದಿಯನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನು ಹುಡುಕುವ ಕೆಲಸ ಆರಂಭವಾಗಿದೆ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಈ ಮೃತ ವ್ಯಕ್ತಿಯೂ ಸೇರಿದಂತೆ ಬುಧವಾರ 6 ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 181ಕ್ಕೆ ಏರಿದೆ. ಈ ಪೈಕಿ ಬೆಂಗಳೂರಿನ 27 ವರ್ಷದ ಮಹಿಳೆ ಮತ್ತು ಚಿಕ್ಕಬಳ್ಳಾಪುರದ 23 ವರ್ಷದ ಯುವಕ ದೆಹಲಿಗೆ ಹೋಗಿ ಬಂದವರು. ಭಟ್ಕಳದ 26 ವರ್ಷದ ಮಹಿಳೆ ದುಬೈನಿಂದ ಬಂದವರೊಂದಿಗೆ ಸಂಪರ್ಕ ಹೊಂದಿದ್ದರು. ಕಲಬುರ್ಗಿಯಲ್ಲಿ 175ನೇ ರೋಗಿಯ ಜತೆಗೆ ಸಂಪರ್ಕ ಇದ್ದ ಅವರ 72 ವರ್ಷದ ತಾಯಿಗೆ, ಮಂಡ್ಯದಲ್ಲಿ 134 ಮತ್ತು 138ನೇ ರೋಗಿಗಳ ಜತೆಗೆ ಸಂಪರ್ಕ ಹೊಂದಿದ್ದ 35 ವರ್ಷದ ಪುರುಷನಿಗೆ ಸಹ ಕೋವಿಡ್–19 ದೃಢಪಟ್ಟಿದೆ’ ಎಂದು ಮಾಹಿತಿ ನೀಡಿದರು.
ಸುನಂದಾಗೆ ಸಿ.ಎಂ ಅಭಿನಂದನೆ
‘ಬೆಳಗಾವಿಯಲ್ಲಿ 15 ದಿನಗಳಿಂದ ಮನೆಗೂ ಹೋಗದೆ ಕೊರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ದಾದಿ ಸುನಂದಾ ಅವರ ಪುತ್ರಿ ಅಮ್ಮನಿಗಾಗಿ ಹಂಬಲಿಸುತ್ತಿರುವ ದೃಶ್ಯ ರಾಜ್ಯದ ಮನ ಕಲಕಿತ್ತು. ಮುಖ್ಯಮಂತ್ರಿ ಅವರು ಇದಕ್ಕಾಗಿ ಸುನಂದಾ ಅವರಿಗೆ ಸ್ವತಃ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ರಾಜ್ಯದಲ್ಲಿ ಸುನಂದಾ ಅವರಂತಹ ಸಾಕಷ್ಟು ಮಂದಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳು ಇರುವ ದಾದಿಯರು, ವೈದ್ಯರನ್ನು ಕರ್ತವ್ಯದಿಂದ ದೂರ ಇಡುವ ಪ್ರಸ್ತಾಪ ಸದ್ಯಕ್ಕಿಲ್ಲ, ಇದರಿಂದ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಬಹುದು’ ಎಂದು ಸುರೇಶ್ ಕುಮಾರ್ ಹೇಳಿದರು.
₹ 50 ಲಕ್ಷ ವಿಮೆ
‘ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್‌ಗೆ ಒಳಪಡಿಸಲಾಗಿದೆ. ಕರ್ತವ್ಯದಲ್ಲಿದ್ದವರು ಒಂದು ವೇಳೆ ಮೃತಪಟ್ಟರೆ ಕುಟುಂಬದವರಿಗೆ
₹50 ಲಕ್ಷದ ವಿಮಾ ಸೌಲಭ್ಯ ದೊರೆಯುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.