ಬೆಂಗಳೂರು: ಕೊರೊನಾ ಬಾಧಿತ9 ಜಿಲ್ಲೆಗಳಲ್ಲಿ ಕರ್ಪ್ಯೂ ಮಾದರಿ ನಿರ್ಬಂಧ ಜಾರಿ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮಾರ್ಚ್ 31ರವರೆಗೆ ಈ ನಿರ್ಬಂಧ ಮುಂದುವರೆಯಲಿದೆ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಸಂಚಾರ ರದ್ದು ಪಡಿಸಲಾಗಿದೆ. ಅಗತ್ಯ ಸೇವೆಗಳಿಗೆ ನಿರ್ಬಂಧವಿಲ್ಲ. ಎಲ್ಲ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಕಲಬುರ್ಗಿ, ಧಾರವಾಡ, ಮಂಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ ಕರ್ಪ್ಯೂ ಮಾದರಿಯ ನಿರ್ಬಂಧ ಜಾರಿ ಮಾಡಲಾಗಿದೆ.
ಮಾರ್ಚ್ 31ರವರೆಗೆ ನಿರ್ಬಂಧದ ಆಜ್ಞೆ ಜಾರಿಯಲ್ಲಿರುತ್ತದೆ ಎಂದು ಸಚಿವರ ಹೇಳಿಕೆ ಹೊರಬಿದ್ದ ಬೆನ್ನಿಗೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಪೊಲೀಸರು ಬೀದಿಗಿಳಿದಿದ್ದು ಅಂಗಡಿಗಳ ಬಾಗಿಲು ಹಾಕಿಸುತ್ತಿದ್ದಾರೆ. ಬೀದಿಯಲ್ಲಿ ನಿಂತಿರುವ ಜನರನ್ನು ಪ್ರಶ್ನಿಸಿ, ಮನೆಗೆ ಹೋಗುವಂತೆ ತಾಕೀತು ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ಲಾಕ್‌ಡೌನ್ ಆದೇಶಕ್ಕೆ ಜನರು ಬೆಲೆ ಕೊಡದ ಹಿನ್ನೆಲೆಯಲ್ಲಿ ಪಂಜಾಬ್ ಇಡೀ ರಾಜ್ಯಕ್ಕೆ ಕರ್ಫ್ಯೂ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕರ್ನಾಟಕದಲ್ಲಿಯೂ ಇಡೀ ರಾಜ್ಯಕ್ಕೆ ಲಾಕ್‌ಡೌನ್ ಘೋಷಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಸರ್ಕಾರ 9 ಜಿಲ್ಲೆಗಳಿಗೆ ಸೀಮಿತಗೊಳಿಸಿ, ನಿರ್ಬಂಧದ ಆಜ್ಞೆ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.