ADVERTISEMENT

ಕೋವಿಡ್ 3ನೇ ಅಲೆ- ಉತ್ಕೃಷ್ಟತಾ ಕೇಂದ್ರ ರಚಿಸಿ: ತಜ್ಞರ ಸಮಿತಿ ಶಿಫಾರಸು

ಸುರಕ್ಷಾ ಪಿ.
Published 19 ಜೂನ್ 2021, 19:31 IST
Last Updated 19 ಜೂನ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಮೂರನೆ ಅಲೆ ಸಂದರ್ಭದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದಾದ ಬಹು ಅಂಗಾಂಗ ಉರಿಯೂತ ಸಮಸ್ಯೆಗೆ (ಮಲ್ಟಿಸಿಸ್ಟಂ ಇನ್‌ಫ್ಲಮೇಟರಿ ಸಿಂಡ್ರೋಮ್‌– ಚಿಲ್ಡ್ರನ್‌) ಚಿಕಿತ್ಸೆ ನೀಡುವುದಕ್ಕಾಗಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಆವರಣದಲ್ಲಿ ಉತ್ಕೃಷ್ಟತಾ ಕೇಂದ್ರ (ಸೆಂಟರ್‌ ಆಫ್‌ ಎಕ್ಸಲೆನ್ಸ್‌) ಆರಂಭಿಸುವಂತೆ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್‌ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಮೂರನೆ ಅಲೆಯ ಸಂದರ್ಭದಲ್ಲಿ ಮಕ್ಕಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ಹಾಗೂ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆಗೆ ಸಲಹೆ ನೀಡಲು ನೇಮಿಸಿರುವ ಡಾ.ದೇವಿ ಪ್ರಸಾದ್‌ ಶೆಟ್ಟಿ ನೇತೃತ್ವದ 18 ಮಂದಿ ತಜ್ಞ ವೈದ್ಯರ ಸಮಿತಿ ಶನಿವಾರ ಪ್ರಾಥಮಿಕ ವರದಿ ಸಲ್ಲಿಸಿದೆ.

ಕೋವಿಡ್‌ ತಗುಲಿರುವ ಮಹಿಳೆಯರಿಗೆ ಜನಿಸಿದ ಹಾಗೂ ಸೋಂಕಿತರಾದ ನವಜಾತ ಶಿಶುಗಳಲ್ಲಿ ನಂತರದ ದಿನಗಳಲ್ಲಿ ಬಹು ಅಂಗಾಂಗ ಉರಿಯೂತ ಸಮಸ್ಯೆ ಉಲ್ಬಣಿಸುತ್ತಿರುವುದು ಕಂಡುಬಂದಿದೆ. ಅದನ್ನು ಆಧರಿಸಿ ವಿಶೇಷ ಕೇಂದ್ರ ಸ್ಥಾಪನೆಗೆ ಶಿಫಾರಸು ಮಾಡಲಾಗಿದೆ. ಈ ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಾಗಿ ತಜ್ಞರ ಸಮಿತಿಯೊಂದನ್ನು ನೇಮಿಸುವಂತೆಯೂ ಶಿಫಾರಸು ಮಾಡಲಾಗಿದೆ.

ADVERTISEMENT

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ, ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆ, ಗುಲ್ಬರ್ಗ, ಹಾಸನ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಕಾಲೇಜುಗಳ ಆಸ್ಪತ್ರೆಗಳಲ್ಲಿ ಪ್ರಾದೇಶಿಕ ಕೋವಿಡ್‌–19 ಮಕ್ಕಳ ಚಿಕಿತ್ಸಾ ಉತ್ಕೃಷ್ಟತಾ ಕೇಂದ್ರಗಳ ಆರಂಭಕ್ಕೆ ಶಿಫಾರಸು ಮಾಡಲಾಗಿದೆ. ಈ ಕೇಂದ್ರಗಳಲ್ಲಿ ತಲಾ 50 ಹಾಸಿಗೆಗಳ ತೀವ್ರ ನಿಗಾ ಘಟಕ, 100 ಹಾಸಿಗೆಗಳ ಎಚ್‌ಡಿಯು ವಾರ್ಡ್‌, 20 ಹಾಸಿಗಳ ನವಜಾತ ಶಿಶುಗಳ ಐಸಿಯು, 20 ಹಾಸಿಗೆಗಳ ತೀವ್ರ ತೊಂದರೆ ಎದುರಿಸುವ ನವಜಾತ ಶಿಶುಗಳ ಐಸಿಯು ಸೌಲಭ್ಯ ಕಲ್ಪಿಸುವಂತೆ ಸಮಿತಿ ಶಿಫಾರಸು ಮಾಡಿದೆ.

ಎಲ್ಲ ಸ್ವಾಯತ್ಥ ಸಂಸ್ಥೆಗಳಲ್ಲಿ ಮಕ್ಕಳ ವಿಭಾಗ, ನವಜಾತ ಶಿಶುಗಳ ಚಿಕಿತ್ಸಾ ವಿಭಾಗ ಹಾಗೂ ಜನರಲ್‌ ಮೆಡಿಸಿನ್‌, ಅರವಳಿಕೆ, ರೇಡಿಯಾಲಜಿ, ಮೈಕ್ರೋಬಯಾಲಜಿ ಮತ್ತು ರೋಗಪತ್ತೆ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗೆ ತ್ವರಿತವಾಗಿ ನೇಮಕಾತಿ ಮಾಡುವಂತೆ ಸಮಿತಿ ಸಲಹೆ ನೀಡಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಏಕ ಗವಾಕ್ಷಿ ವ್ಯವಸ್ಥೆಯಡಿ ಈ ನೇಮಕಾತಿಗಳನ್ನು ನಡೆಸಬೇಕು. ಆಸ್ಪತ್ರೆಗಳಲ್ಲಿರುವ ಎಲ್ಲ ಹಾಸಿಗೆಗಳಿಗೂ ಆಮ್ಲಜನಕ ಪೂರೈಕೆ ಸಂಪರ್ಕ ಕಲ್ಪಿಸಬೇಕು ಎಂಬ ಶಿಫಾರಸು ಕೂಡ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.