ADVERTISEMENT

ವೆಂಟಿಲೇಟರ್‌ ಖರೀದಿ: ನೂರಾರು ಕೋಟಿ ಅಕ್ರಮ

ಕೋವಿಡ್‌ ಖರೀದಿ: ಉನ್ನತ ತನಿಖೆ ಮತ್ತು ಕಠಿಣ ಕಾನೂನು ಕ್ರಮಕ್ಕೆ ತನಿಖಾ ಆಯೋಗ ಶಿಫಾರಸು

ಜಯಸಿಂಹ ಆರ್.
Published 17 ನವೆಂಬರ್ 2024, 19:40 IST
Last Updated 17 ನವೆಂಬರ್ 2024, 19:40 IST
   

ಬೆಂಗಳೂರು: ಕೋವಿಡ್‌ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು 1,137 ವೆಂಟಿಲೇಟರ್‌ಗಳನ್ನು ಖರೀದಿಸಿದೆ. ಇದರಲ್ಲಿ ₹16 ಕೋಟಿಯಷ್ಟು ಅಕ್ರಮ ನಡೆದಿದ್ದು, ಇನ್ನೂ ₹106 ಕೋಟಿಯಷ್ಟು ಶಂಕಾಸ್ಪದ ಅಕ್ರಮ ವಹಿವಾಟು ನಡೆದಿದೆ. ಈ ಬಗ್ಗೆ ಉನ್ನತ ತನಿಖೆ ನಡೆಸಿ, ಸಂಬಂಧಿತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿಕುನ್ಹ ಆಯೋಗವು ಶಿಫಾರಸು ಮಾಡಿದೆ.

ಆಯೋಗವು ಸಲ್ಲಿಸಿರುವ ಮಧ್ಯಂತರ ವರದಿಯ ಮೂರನೇ ಭಾಗದಲ್ಲಿ ಈ ಮಾಹಿತಿ ಇದೆ. ಅಷ್ಟೂ ವೆಂಟಿಲೇಟರ್‌ಗಳ ಖರೀದಿಗೆ ಸಂಬಂಧಿಸಿದ ಪೂರ್ಣ ದಾಖಲೆಗಳು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಬಳಿಯಾಗಲೀ, ಇಬ್ಬರು ಪೂರೈಕೆದಾರರ ಬಳಿಯಾಗಲೀ ಲಭ್ಯವಿಲ್ಲ ಎಂದು ಆಯೋಗ ಹೇಳಿದೆ.

ವಿವಿಧ ಅವತರಣಿಕೆಯ 647 ವೆಂಟಿಲೇಟರ್‌ಗಳನ್ನು ಒದಗಿಸುವ ಐದು ಪ್ರತ್ಯೇಕ ಪೂರೈಕೆ ಆದೇಶಗಳನ್ನು ನಿರ್ದೇಶನಾಲಯವು ಎನ್‌ಕಾರ್ಟಾ ಫಾರ್ಮಾಗೆ ನೀಡಿತ್ತು. ಈ ಖರೀದಿಯ ಒಟ್ಟು ಮೊತ್ತ ₹107.40 ಕೋಟಿ. ಇದರಲ್ಲಿ ಎನ್‌ಕಾರ್ಟಾ ಕಂಪನಿಗೆ ₹105.87 ಕೋಟಿ ಪಾವತಿ ಮಾಡಲಾಗಿದೆ ಎಂದು ನಿರ್ದೇಶನಾಲಯವು ವಿವರಣೆ ನೀಡಿತ್ತು. ಆದರೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಂಪನಿಯಾಗಲಿ, ನಿರ್ದೇಶನಾಲಯವಾಗಲಿ ಸಲ್ಲಿಸಿರಲಿಲ್ಲ ಎಂದು ಆಯೋಗ ವಿವರಿಸಿದೆ.

ADVERTISEMENT

ಈ ವಹಿವಾಟಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿ ಎಂದು ಕಂಪನಿ ಮತ್ತು ನಿರ್ದೇಶನಾಲಯಕ್ಕೆ ಸೂಚಿಸಲಾಗಿತ್ತು. ಆಗಲೂ ಅಗತ್ಯ ದಾಖಲೆಗಳನ್ನು ಅವು ಸಲ್ಲಿಸಲಿಲ್ಲ. ಹೀಗಾಗಿ ಲಭ್ಯವಿರುವ ದಾಖಲೆಗಳನ್ನೇ ಪರಿಶೀಲಿಸಲಾಯಿತು. 647 ವೆಂಟಿಲೇಟರ್‌ಗಳನ್ನು ಪೂರೈಸಿದ್ದೇವೆ ಎಂದು ಎನ್‌ಕಾರ್ಟಾ ಮಾಹಿತಿ ನೀಡಿದೆ. ಆದರೆ ಅವುಗಳನ್ನು ಪಡೆದುಕೊಂಡಿದ್ದರ ಬಗ್ಗೆ ಅದು ಸಲ್ಲಿಸಿರುವ ದಾಖಲೆಗಳಲ್ಲಿ ಯಾವುದೇ ಸಹಿ ಮತ್ತು ಮೊಹರು ಇಲ್ಲ ಎಂದು ಆಯೋಗ ಹೇಳಿದೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ತನಗೆ ಪಾವತಿಯಾಗಿರುವ ಹಣದ ವಿವರ ಇರುವ ಲೆಡ್ಜರ್ ಅನ್ನು ಎನ್‌ಕಾರ್ಟಾ ಒದಗಿಸಿದೆ. ಕೋವಿಡ್‌ ಅವಧಿಯಲ್ಲಿ ನಿರ್ದೇಶನಾಲಯದಿಂದ ಆಗಿರುವ ಎಲ್ಲ ಪಾವತಿಗಳ ವಿವರ ಅದರಲ್ಲಿ ಇದೆಯೇ ಹೊರತು, ವೆಂಟಿಲೇಟರ್‌ಗಳ ಪೂರೈಕೆಗೆ ಸಂಬಂಧಿಸಿದ ಪಾವತಿ ಮಾಹಿತಿ ಅದರಲ್ಲಿ ಸ್ಪಷ್ಟವಾಗಿಲ್ಲ. ಹೀಗಾಗಿ ಈ ₹105.87 ಕೋಟಿ ಪಾವತಿ ನಡೆದಿರುವ ಬಗ್ಗೆಯೇ ಶಂಕೆಯಿದೆ ಎಂದು ಆಯೋಗದ ವರದಿ ವಿವರಿಸಿದೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಕಡತಗಳನ್ನು ಪರಿಶೀಲಿಸಿದಾಗ 647 ವೆಂಟಿಲೇಟರ್‌ಗಳ ಪೂರೈಕೆಗೆ ಸಂಬಂಧಿಸಿದ ಕೆಲವು ಮೆಮೊಗಳು ಮತ್ತು ಬಿಡಿ ಹಾಳೆಗಳಲ್ಲಿ ಬರೆದುಕೊಂಡ ಕೆಲ ಮಾಹಿತಿಗಳು ದೊರೆತವು. ಎನ್‌ಕಾರ್ಟಾಗೆ ಐದು ಬಾರಿ ಹಣ ಪಾವತಿ ಮಾಡಲಾಗಿದೆ ಎಂಬ ಮಾಹಿತಿ ಬಿಡಿ ಹಾಳೆಗಳಲ್ಲಿ ಇದೆ. ₹105.87 ಕೋಟಿಯಷ್ಟು ದೊಡ್ಡ ಮೊತ್ತದ ಪಾವತಿ ನಡೆಸುವಾಗ, ಇಷ್ಟು ನಿರ್ಲಕ್ಷ್ಯದಿಂದ ದಾಖಲೆಗಳನ್ನು ನಿರ್ವಹಿಸಲಾಗಿದೆ ಎಂದು ಆಯೋಗ ಹೇಳಿದೆ.

ಈ ವಹಿವಾಟು ತೀರಾ ಅನುಮಾನಾಸ್ಪದವಾಗಿದೆ. ಹಣ ಯಾರಿಂದ ಯಾರಿಗೆ ಮತ್ತು ಯಾವಾಗ ಪಾವತಿಯಾಗಿದೆ ಎಂಬ ನಿಖರ ಮಾಹಿತಿ ಇಲ್ಲ. ಈ ವಿವರಗಳನ್ನು ಪತ್ತೆ ಮಾಡಲು ಕೂಲಂಕಷ ತನಿಖೆಯ ಅಗತ್ಯವಿದೆ. ಈ ವಹಿವಾಟಿನಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಿ, ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ಹಣ ವಸೂಲಿಗೆ ಕ್ರಮ ವಹಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಪೂರೈಕೆ ಆಗದಿದ್ದರೂ ₹13.40 ಕೋಟಿ ಪಾವತಿ

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ 490 ವೆಂಟಿಲೇಟರ್‌ಗಳನ್ನು ಪೂರೈಸಿ, ಅಳವಡಿಸುವ ಗುತ್ತಿಗೆಯನ್ನು ಸನ್‌ ಝೆನ್‌ ಎಂಟರ್‌ಪ್ರೈಸಸ್‌ಗೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ನೀಡಿತ್ತು. ಕಂಪನಿಯು ಎಲ್ಲ ವೆಂಟಿಲೇಟರ್‌ಗಳನ್ನು ಪೂರೈಸದೇ ಇದ್ದರೂ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಮಾಡಲಾಗಿದೆ. ಇದರಲ್ಲಿ ₹13.40 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ವರದಿ ಹೇಳಿದೆ.

2020ರ ಮಾರ್ಚ್‌ನಿಂದ 2021ರ ಅಕ್ಟೋಬರ್‌ ನಡುವೆ ಒಟ್ಟು ನಾಲ್ಕು ಪೂರೈಕೆ ಆದೇಶಗಳಲ್ಲಿ 490 ವೆಂಟಿಲೇಟರ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ಸನ್‌ ಝೆನ್‌ ಪಡೆದುಕೊಂಡಿತ್ತು. ಆದರೆ ಕಂಪನಿ ಪೂರೈಸಿ, ಅಳವಡಿಕೆ ಮಾಡಿದ್ದು 402 ವೆಂಟಿಲೇಟರ್‌ಗಳನ್ನು ಮಾತ್ರ. ಆದರೆ 490 ವೆಂಟಿಲೇಟರ್‌ಗಳಿಗೆ ಬಿಲ್‌ ಸಲ್ಲಿಸಿದೆ. ಇಲ್ಲಿ ಕಂಪನಿ ಕಡೆಯಿಂದ ಲೋಪವಾಗಿದೆ ಎಂದು ವರದಿ ವಿವರಿಸಿದೆ.

ಕಂಪನಿ ಎಲ್ಲ ವೆಂಟಿಲೇಟರ್‌ಗಳನ್ನು ಪೂರೈಸಿದೆಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಖಚಿತಪಡಿಸಿಕೊಂಡಿಲ್ಲ. ವಿಳಂಬ ಪೂರೈಕೆಗೆ ₹24.70 ಲಕ್ಷ ದಂಡ ಮುರಿದುಕೊಂಡು ₹68.06 ಕೋಟಿಯನ್ನು ಕಂಪನಿಗೆ ಪಾವತಿ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹13.40 ಕೋಟಿ ನಷ್ಟವಾಗಿದೆ. ಇದು ನಿರ್ಲಕ್ಷ್ಯದಿಂದ ಆಗಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ಆಳ ತನಿಖೆಯ ಅಗತ್ಯವಿದೆ ಎಂದು ಆಯೋಗ ಶಿಫಾರಸು ಮಾಡಿದೆ.

‘ಖರೀದಿ ಉದ್ದೇಶವೇ ವ್ಯರ್ಥ’

ವೆಂಟಿಲೇಟರ್‌ಗಳ ಖರೀದಿ ಒಪ್ಪಂದದಲ್ಲಿ, ‘30 ದಿನಗಳ ಒಳಗೆ ಪೂರೈಸಬೇಕು’ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಷರತ್ತು ಹಾಕಿದೆ. ಆದರೆ ಎನ್‌ಕಾರ್ಟಾ ಫಾರ್ಮಾ ಗಡುವಿನೊಳಗೆ ಒಂದೂ ವೆಂಟಿಲೇಟರ್‌ ಅನ್ನು ಪೂರೈಸಿಲ್ಲ. ಎರಡು ತಿಂಗಳಿಂದ ಎಂಟು ತಿಂಗಳವರೆಗೆ ಪೂರೈಕೆ ಆಗಿವೆ. ಆದರೆ ಈ ಎಲ್ಲ ವಿಳಂಬಕ್ಕೆ ದಂಡ ವಿಧಿಸಲು ಅವಕಾಶವಿದ್ದರೂ ದಂಡ ವಿಧಿಸಿಲ್ಲ. ಇದರಿಂದ ಬೊಕ್ಕಸಕ್ಕೆ ₹2.03 ಕೋಟಿ ನಷ್ಟವಾಗಿದೆ ಎಂದು ಆಯೋಗ ಹೇಳಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್‌ ತೀವ್ರತೆ ಸಂಪೂರ್ಣ ಇಳಿಕೆಯಾದ ನಂತರ, 2023ರಲ್ಲಿ ನೂರಾರು ವೆಂಟಿಲೇಟರ್‌ಗಳನ್ನು ಎನ್‌ಕಾರ್ಟಾ ಕಂಪನಿ ಪೂರೈಸಿದೆ. ಅವುಗಳ ಅಳವಡಿಕೆಯಲ್ಲಿ ಮತ್ತಷ್ಟು ವಿಳಂಬ ಮಾಡಿದೆ. ಹೀಗೆ ಹತ್ತಾರು ತಿಂಗಳು ವಿಳಂಬವಾದ ನಂತರ ಪೂರೈಕೆ ಆದ ಕಾರಣಕ್ಕೆ, ವೆಂಟಿಲೇಟರ್‌ಗಳ ಖರೀದಿಯ ಉದ್ದೇಶವೇ ವ್ಯರ್ಥವಾಗಿದೆ. ಜನರಿಗೆ ಉಪಯೋಗವೂ ಆಗಿಲ್ಲ, ಸರ್ಕಾರದ ಬೊಕ್ಕಸದ ಹಣ ವ್ಯರ್ಥವಾಗಿದೆ ಎಂದಿದೆ.

ಆಯೋಗ ಹೇಳಿದ್ದು...

* ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳದೆ ಸಾವಿರಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ಖರೀದಿಸಲು ಆದೇಶಿಸಲಾಗಿದೆ. ತಾಂತ್ರಿಕ ಸಮಿತಿಯ ಅಭಿಪ್ರಾಯವನ್ನೂ ಪಡೆದುಕೊಳ್ಳದೆ ಪ್ರಕ್ರಿಯೆ ನಡೆಸಲಾಗಿದೆ

* ಎನ್‌ಕಾರ್ಟಾ ಕಂಪನಿಯಿಂದ ಬ್ಯಾಂಕ್‌ ಗ್ಯಾರಂಟಿ ಪಡೆದುಕೊಳ್ಳಬೇಕು ಎಂಬ ಷರತ್ತು ಇದ್ದರೂ, ಅದನ್ನು ಕಡೆಗಣಿಸಲಾಗಿದೆ. ಬ್ಯಾಂಕ್‌ ಗ್ಯಾರಂಟಿ ಪಡೆದುಕೊಳ್ಳದೆ ಶೇ 50ರಷ್ಟು ಹಣವನ್ನು ಮುಂಗಡವಾಗಿ ನೀಡಲಾಗಿದೆ

* ಎನ್‌ಕಾರ್ಟಾ ಕಂಪನಿಯು ಒಂದು ವರ್ಷ ವಿಳಂಬದ ನಂತರ ಯೂರೊ ಎಕ್ಸಿಮ್‌ ಬ್ಯಾಂಕ್ ಎಂಬ ವಿದೇಶಿ ಬ್ಯಾಂಕ್‌ನ ಬ್ಯಾಂಕ್‌ ಗ್ಯಾರಂಟಿ ಸಲ್ಲಿಸಿದೆ. ಇದೂ ನಿಯಮಬಾಹಿರ

* ಈ ವಹಿವಾಟುಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಎನ್‌ಕಾರ್ಟಾ ಫಾರ್ಮಾ ಮತ್ತು ಸನ್‌ ಝೆನ್‌ ಎಂಟರ್‌ಪ್ರೈಸಸ್‌ನಿಂದ ಕಲೆಹಾಕಲು ತನಿಖೆಯ ಅವಶ್ಯಕತೆ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.