ADVERTISEMENT

ಜೂ.14ರವರೆಗೂ ಲಾಕ್‌ಡೌನ್‌: ₹500 ಕೋಟಿ ನೆರವಿನ ಗಂಟು

ಅನುದಾನ ರಹಿತ ಶಿಕ್ಷಕರಿಗೆ ₹5ಸಾವಿರ l ಅರ್ಚಕರಿಗೆ ₹3 ಸಾವಿರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 0:15 IST
Last Updated 4 ಜೂನ್ 2021, 0:15 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ಇದೇ 7ರ ಮುಂಜಾನೆಯವರೆಗೆ ಇದ್ದ ಲಾಕ್‌ಡೌನ್‌ ಅನ್ನು ಜೂನ್‌ 14 ರ ಬೆಳಗಿನ 6ಗಂಟೆಯವರೆಗೆ ವಿಸ್ತರಿಸಲಾಗಿದ್ದು, ಸಂಕಷ್ಟದಲ್ಲಿರುವ ಇನ್ನೂ ಕೆಲವು ದುಡಿಯುವ ವರ್ಗದ ಸಮುದಾಯದವರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವಿನ ಪ್ಯಾಕೇಜ್‌ ಘೋಷಿಸಿದೆ.

ನೇಕಾರರು, ಮೀನುಗಾರರು, ಚಲನಚಿತ್ರ ಮತ್ತು ಕಿರುತೆರೆ ಅಸಂಘಟಿತ ಕಾರ್ಮಿಕರು, ಅರ್ಚಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪರಿಹಾರ ಕಲ್ಪಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಎರಡನೇ ಹಂತದ ಪ್ಯಾಕೇಜ್‌ನ ವಿವರ ಪ್ರಕಟಿಸಿದರು. ಮೊದಲ ಹಂತದಲ್ಲಿ ₹1,250 ಕೋಟಿ ಮೊತ್ತದ ಪ್ಯಾಕೇಜ್‌ ಪ್ರಕಟಿಸಿದ್ದರು.

ADVERTISEMENT

ಮೊದಲ ಹಂತದ ಪ್ಯಾಕೇಜ್‌ನಲ್ಲಿ ಶೇ 70 ರಷ್ಟು ಜನರಿಗೆ ಪರಿಹಾರ ಪಾವತಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಎರಡನೇ ಹಂತದ ಪ್ಯಾಕೇಜ್‌ ಪರಿಹಾರ ನೀಡುವ ಕಾರ್ಯ ಇನ್ನೆರಡು ದಿನಗಳಲ್ಲಿ ಆರಂಭಿಸಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು.

‘ಈಗಿರುವ ಲಾಕ್‌ಡೌನ್‌ ನಿಯಮಗಳೇ ಮುಂದುವರಿಯಲಿವೆ. ಜೂನ್‌ 14 ರ ಬಳಿಕ ಕೋವಿಡ್‌ ದೃಢ (ಪಾಸಿಟಿವ್‌) ಸಂಖ್ಯೆ ಶೇ 5 ಕ್ಕಿಂತಲೂ ಕಡಿಮೆಯಾದರೆ, ಜನ ಸಹಕರಿಸಿದರೆ, ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಗೊಳಿಸುವುದರ ಜತೆಗೆ ಲಾಕ್‌ಡೌನ್‌ ತೆರವುಗೊಳಿಸಲಾಗುವುದು’ ಎಂದೂ ತಿಳಿಸಿದರು.

ಯಾರಿಗೆಲ್ಲ ಸಿಗಲಿದೆ ಪರಿಹಾರ

*ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ ₹5,000 ಪರಿಹಾರಕ್ಕಾಗಿ ₹100 ಕೋಟಿ ಅನುದಾನ.

* ಕೋವಿಡ್‌ ಮುಂಚೂಣಿ ಯೋಧರಾಗಿರುವ ಆಶಾ ಕಾರ್ಯಕರ್ತೆಯರಿಗೆ ತಲಾ ₹3,000 ಪರಿಹಾರ. ಒಟ್ಟು 42,574 ಆಶಾ ಕಾರ್ಯಕರ್ತೆಯರಿಗೆ ನೆರವು. ಇದಕ್ಕಾಗಿ ₹12.75 ಕೋಟಿ ಅನುದಾನ.

* 64,423 ಅಂಗನವಾಡಿ ಕಾರ್ಯಕರ್ತರು ಮತ್ತು 59,169 ಅಂಗನವಾಡಿ ಸಹಾಯಕರಿಗೆ ತಲಾ ₹2,000 ಗಳಂತೆ ಪರಿಹಾರಕ್ಕಾಗಿ ₹24.5 ಕೋಟಿ.

* ಪ್ರತಿ ವಿದ್ಯುತ್‌ ಮಗ್ಗದಲ್ಲಿ ಇಬ್ಬರು ಕೆಲಸಗಾರರಿಗೆ ಮಾತ್ರ ತಲಾ ₹3,000 ನೀಡಲಾಗುವುದು. ಸುಮಾರು 59 ಸಾವಿರ ವಿದ್ಯುತ್‌ ಮಗ್ಗ ಘಟಕಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಉದ್ದೇಶಕ್ಕೆ ₹35 ಕೋಟಿ ವೆಚ್ಚ.

* ಚಲನಚಿತ್ರೋದ್ಯಮ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾ ₹3,000 ಪರಿಹಾರ. 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಇದರ ಲಾಭ ಸಿಗಲಿದೆ. ಇದಕ್ಕೆ ₹6.6 ಕೋಟಿ ವಿನಿಯೋಗ.

* ಕೇಂದ್ರ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ ₹3,000 ಪರಿಹಾರ. ಇದಕ್ಕೆ ₹5.6 ಕೋಟಿ ವೆಚ್ಚವಾಗಲಿದೆ. ಅಲ್ಲದೆ,7,668 ಒಳನಾಡು ದೋಣಿ ಮಾಲೀಕರಿಗೆ ತಲಾ ₹3,000 ಪರಿಹಾರ. ಇದಕ್ಕಾಗಿ ₹2.3 ಕೋಟಿ ಹಂಚಿಕೆ.

ಶಾಲಾ ಮಕ್ಕಳಿಗೆ ಅರ್ಧ ಕೆ.ಜಿ ಹಾಲಿನ ಪುಡಿ

ರಾಜ್ಯದಲ್ಲಿ ಹಾಲಿಗೆ ಬೇಡಿಕೆ ಕಡಿಮೆ ಆಗಿದ್ದು, ಇದರಿಂದ ಹೈನುಗಾರರಿಗೆ ಸಮಸ್ಯೆ ಆಗದಂತೆ ಹೆಚ್ಚುವರಿ ಹಾಲಿನಿಂದ ಪುಡಿ ತಯಾರಿಸಲು ನಿರ್ಧರಿಸಲಾಗಿದೆ. ಈ ರೀತಿ ತಯಾರಿಸಿದ ಪುಡಿಯನ್ನು ಶಾಲಾ ಮಕ್ಕಳಿಗೆ ತಲಾ ಅರ್ಧ ಕೆ.ಜಿಯಂತೆ ವಿತರಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಈಗಾಗಲೇ ಆಹಾರ ಧಾನ್ಯ ವಿತರಿಸುತ್ತಿದ್ದು, ಅದರ ಜತೆ ಜೂನ್‌ ಮತ್ತು ಜುಲೈ ತಿಂಗಳಿಗೆ ಹಾಲಿನ ಪುಡಿ ವಿತರಿಸಲಾಗುವುದು. ಇದರಿಂದ ಸರ್ಕಾರಕ್ಕೆ ₹100 ಕೋಟಿ ವೆಚ್ಚವಾಗಲಿದೆ ಎಂದು ಹೇಳಿದರು.

ಸಣ್ಣ ಉದ್ಯಮಗಳಿಗೆ ಪರಿಹಾರ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ(ಎಂಎಸ್‌ಎಂಇ) ಇದೇ ಮೇ ಮತ್ತು ಜೂನ್‌ ತಿಂಗಳ ವಿದ್ಯುತ್‌ ನಿಗದಿತ ಶುಲ್ಕ (ಫಿಕ್ಸೆಡ್‌ ಚಾರ್ಜಸ್‌) ಪಾವತಿಸುವುದರಿಂದ ವಿನಾಯಿತಿ ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹114.70 ಕೋಟಿ ವೆಚ್ಚವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ಎಂಎಸ್‌ಎಂಇ ಬಿಟ್ಟು ಇತರೆ ಕೈಗಾರಿಕೆಗಳ ಬಳಕೆದಾರರು ಮೇ ಮತ್ತು ಜೂನ್‌ ತಿಂಗಳ ವಿದ್ಯುತ್ ನಿಗದಿತ ಶುಲ್ಕ ಪಾವತಿಸಲು ಜುಲೈ 30 ರವರೆಗೆ ಅವಕಾಶ ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹5.56 ಕೋಟಿ ಹೊರೆಯಾಗಲಿದೆ. ಈ ಎರಡೂ ಕ್ರಮಗಳಿಂದ ಸುಮಾರು 3 ಲಕ್ಷ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.