ರಾಮನಗರ: ಭಾನುವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್ ಅವರಿಗೆ ಕೋವಿಡ್ ಪತ್ತೆ ಪರೀಕ್ಷೆಗೆ ತೆರಳಿದ್ದ ಇಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಮನೆಯಲ್ಲಿಯೇ ಪ್ರತ್ಯೇಕ ವಾಸಕ್ಕೆ ಒಳಗಾಗಿದ್ದಾರೆ.
‘ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರು ರಾಮನಗರದಲ್ಲಿ ಆಂಟಿಜನ್ ಪರೀಕ್ಷೆಗೆ ಒಳಪಟ್ಟಿದ್ದು, ಅಲ್ಲಿ ಕೋವಿಡ್ ಪಾಸಿಟಿವ್ ಫಲಿತಾಂಶ ಬಂದಿತು. ಅವರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೂ ಒಳಪಡಿಸಿದ್ದು, ಫಲಿತಾಂಶ ಬರುವುದು ಬಾಕಿ ಇದೆ’ ಎಂದು ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಭಾನುವಾರ ರಾತ್ರಿ ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆಯ ಮೊದಲ ದಿನದ ನಡಿಗೆ ಮುಗಿಸಿ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಡಿಎಚ್‌ಒ ಇಬ್ಬರೂ ಅಲ್ಲಿಗೆ ತೆರಳಿದ್ದರು. ಕೋವಿಡ್ ಪತ್ತೆ ಪರೀಕ್ಷೆಗೆ ಒಳಗಾಗುವಂತೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದರು.
ಆದರೆ, ಇದರಿಂದ ಕೆಂಡಾಮಂಡಲವಾದ ಡಿಕೆಶಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ನಾನು ಈಗಷ್ಟೇ 15 ಕಿ.ಮೀ ನಡೆದು ಬಂದಿದ್ದು, ಆರೋಗ್ಯದಿಂದ ಇದ್ದೇನೆ. ಸೋಂಕಿನ ಯಾವ ಲಕ್ಷಣಗಳೂ ಇಲ್ಲ. ನಮ್ಮನ್ನು ನೋಡಿಕೊಳ್ಳಲೆಂದೇ ಇಲ್ಲಿ ನೂರು ಮಂದಿ ವೈದ್ಯರನ್ನು ನೇಮಿಸಿಕೊಂಡಿದ್ದೇವೆ. ಹೀಗಾಗಿ ನಿಮ್ಮ ಪರೀಕ್ಷೆಯ ಅಗತ್ಯ ಇಲ್ಲ’ ಎಂದು ಅಸಮಾಧಾನವ್ಯಕ್ತಪಡಿಸಿದ್ದರು.
‘ನಿಮ್ಮ ಹೆಲ್ತ್ ಮಿನಿಸ್ಟರ್‌ಗೆ ಹೇಳಿ. ಯಾರೋ ಬಚ್ಚಾ ಹತ್ತಿರ ಆಟ ಆಡಲಿ ಅವನು. ಬೇಕಿದ್ದರೆ ಅವನೇ ಟೆಸ್ಟ್ ಮಾಡಿಸಿಕೊಳ್ಳಲಿ. ಕೇಂದ್ರ ಸಚಿವರ ಹೆಣವನ್ನೇ ನಿಮ್ಮ ಸರ್ಕಾರದವರು ಬಿಸಾಡಿ ಬಿಟ್ಟರು. ಆದರೆ ಕನಕಪುರದಲ್ಲಿ ನಮ್ಮವರು ಕೋವಿಡ್ ಕಿಟ್ ತೊಟ್ಟು ಜನರ ಅಂತ್ಯಕ್ರಿಯೆ ಮಾಡಿದ್ದಾರೆ. ನಮಗೆ ಯಾವ ರೋಗವೂ ಇಲ್ಲ’ ಎಂದುಗದರಿಸಿದ್ದರು. ಇದರಿಂದ ಬೆದರಿದ್ದ ಅಧಿಕಾರಿಗಳು ಅಲ್ಲಿಂದ ನಿರ್ಗಮಿಸಿದ್ದರು.
‘ನನ್ನ ವಿರುದ್ಧ ಸರ್ಕಾರದ ಸಂಚು’
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರಿಗೆ ಕೋವಿಡ್ ಸುದ್ದಿ ತಿಳಿಯುತ್ತಲೇ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ‘ರಾಜ್ಯ ಸರ್ಕಾರ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದು, ಕೋವಿಡ್ ಪಾಸಿಟಿವ್ ಇರುವ ಅಧಿಕಾರಿಯನ್ನು ಬೇಕಂತಲೇ ನನ್ನ ಪರೀಕ್ಷೆಗೆ ಕಳುಹಿಸಿದೆ. ಈ ಮೂಲಕ ಶಿವಕುಮಾರ್‌ಗೆ ಕೊರೊನಾ ಸೋಂಕು ಹರಡಿಸಲು ನೋಡುತ್ತಿದೆ. ಇದರ ಹಿಂದೆ ಆರೋಗ್ಯ ಹಾಗೂ ಗೃಹ ಸಚಿವರ ಕೈವಾಡ ಇದೆ’ ಎಂದು ದೂರಿದರು.
ಬಿಜೆಪಿಗೆ ಕೋವಿಡ್ ಕಲೆಕ್ಷನ್ ಕಡಿಮೆ ಆಗಿದ್ದು, ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚು ತೋರಿಸಿ ಹಣ ಮಾಡಲು ಹೊರಟಿದೆ. ಇದರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವರ ಊರಿನಲ್ಲಿ ಇದೇ 3-4 ರಂದು ಕಾರ್ಯಕ್ರಮ ಮಾಡಿದ್ದಾರೆ. ಶಾಸಕ ರೇಣುಕಾಚಾರ್ಯ ಹೋರಿ ಬೆದರಿಸೋ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಹೀಗೆ ಬಿಜೆಪಿ ನಾಯಕರು ಯಾವುದೇ ಕಾರ್ಯಕ್ರಮ ಮಾಡಿದರೂ ಪ್ರಕರಣ ದಾಖಲಿಸಿಲ್ಲ. ಈಗ ನಮ್ಮ 31 ಮಂದಿ ಮೇಲೆ ಕೇಸ್ ಹಾಕಿದ್ದಾರೆ. ಇದರ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮೂರು ದಿನ ಮೌನ
ರಾಷ್ಟ್ರ ಮಟ್ಟದ ಮಾಧ್ಯಮಗಳನ್ನು ಸರ್ಕಾರ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದೆ. ಇದನ್ನು ಖಂಡಿಸಿ ಮುಂದಿನ ಮೂರು ದಿನ ಕಾಲ ನಾನು ಮೌನವಾಗಿ ಪಾದಯಾತ್ರೆ ನಡೆಸಲಿದ್ದೇನೆ. ಯಾವ ಮಾಧ್ಯಮದವರೊಂದಿಗೂ ಮಾತನಾಡುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.