ಬೆಂಗಳೂರು: ಕೋವಿಡ್ ನಿರ್ವಹಣೆಗಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಮೂರು ಸಾವಿರಕ್ಕೂ ಹೆಚ್ಚು ‘ಐಸಿಯು ಕಾಟ್’ಗಳನ್ನು ಖರೀದಿಸಿತ್ತು. ಪ್ರತಿ ಕಾಟ್ ₹98,000ಕ್ಕೆ ಲಭ್ಯವಿದ್ದರೂ ₹1.91 ಲಕ್ಷಕ್ಕೆ ಖರೀದಿಸಿದೆ. ದುಪ್ಪಟ್ಟು ದರಕೊಟ್ಟು ಖರೀದಿ ಮಾಡುವಲ್ಲಿ ₹25.49 ಕೋಟಿ ಅಕ್ರಮ ನಡೆದಿದೆ ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹ ಆಯೋಗದ ವರದಿ ಹೇಳಿದೆ.
ಕೋವಿಡ್ ಖರೀದಿಯಲ್ಲಿನ ಅಕ್ರಮ ಸಂಬಂಧ ಡಿಕುನ್ಹ ಆಯೋಗವು ಸಲ್ಲಿಸಿರುವ ಮಧ್ಯಂತರ ವರದಿಯ ಮೂರನೇ ಭಾಗದಲ್ಲಿ ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಆಗಿರುವ ಲೋಪ ಮತ್ತು ಅಕ್ರಮಗಳನ್ನು ವಿವರಿಸಲಾಗಿದೆ.
ವರದಿಯಲ್ಲೇನಿದೆ?:
ತಲಾ ಒಂದು ಐಸಿಯು ಕಾಟ್‌ಗೆ ಗರಿಷ್ಠ ₹1.50 ಲಕ್ಷ ಪಾವತಿಸಬಹುದು ಎಂದು ಮಿತಿ ಹೇರಿ, 2020ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ವಾಸ್ತವದಲ್ಲಿ ₹98,000ಕ್ಕೆ ಅಂತಹ ಕಾಟ್ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಆದರೂ ಸರ್ಕಾರ ಇದನ್ನು ಪರಿಶೀಲಿಸದೆ, ಒಂದು ಕಾಟ್‌ಗೆ ₹1.50 ಲಕ್ಷದವರೆಗೂ ಪಾವತಿಸಬಹುದು ಎಂದು ಹೇಳಿದೆ. ಆ ಗರಿಷ್ಠ ಮಿತಿಯನ್ನೂ ಉಲ್ಲಂಘಿಸಿ ನಿರ್ದೇಶನಾಲಯವು ಹೆಚ್ಚಿನ ದರಕ್ಕೆ ಕಾಟ್‌ಗಳನ್ನು ಖರೀದಿಸಿದೆ.
ಐಸಿಯು ಕಾಟ್‌ಗಳ ಖರೀದಿಗೆ ನಿರ್ದೇಶನಾಲಯವು 2020–21ರಲ್ಲಿ ಕೊಟೇಷನ್ ಆಹ್ವಾನಿಸಿತ್ತು. ಟ್ರಯಾನ್ಸ್ ವೆಂಟಿಲೇಟರ್ಸ್ ತಲಾ ಒಂದು ಐಸಿಯು ಕಾಟ್ ಅನ್ನು ₹98,000ಕ್ಕೆ, ಬಯೊಮೆಡಿಕ್ ಕಂಪನಿಯು ತಲಾ ₹1.03 ಲಕ್ಷಕ್ಕೆ ಮತ್ತು ನ್ಯೂಟೆಕ್ ಗ್ಲೋಬಲ್ ಒಂದು ಕಾಟ್ ಅನ್ನು ₹1.91 ಲಕ್ಷಕ್ಕೆ ಪೂರೈಸುವುದಾಗಿ ಕೊಟೇಷನ್ ಸಲ್ಲಿಸಿದ್ದವು.
ನಿರ್ದೇಶನಾಲಯವು ಯಾವುದೇ ಸೂಕ್ತ ಕಾರಣ ನೀಡದೆ ₹98,000 ಮತ್ತು ₹1.03 ಲಕ್ಷದ ಕೊಟೇಷನ್‌ಗಳನ್ನು ತಿರಸ್ಕರಿಸಿದೆ. ನ್ಯೂಟೆಕ್ ಗ್ಲೋಬಲ್‌ನ ₹1.91 ಲಕ್ಷದ ಕೊಟೇಷನ್ ಒಪ್ಪಿಕೊಂಡಿದೆ. ವಾಸ್ತವದಲ್ಲಿ, ಕಡಿಮೆ ಬೆಲೆಗೆ ಖರೀದಿಸುವ ಉದ್ದೇಶವೇ ಇಲ್ಲ. ಬದಲಿಗೆ ಮಾರುಕಟ್ಟೆ ದರವನ್ನು ತಿಳಿದುಕೊಳ್ಳಲು ಕೊಟೇಷನ್ ಆಹ್ವಾನಿಸಲಾಗಿದೆ. ಕೊಟೇಷನ್‌ನಲ್ಲಿ ವ್ಯಕ್ತವಾದ ದರವನ್ನು ಬಳಸಿಕೊಂಡು, ಮೊದಲೇ ಗುರುತಿಸಲಾಗಿದ್ದ ಪೂರೈಕೆದಾರರ ಜತೆ ಚೌಕಾಸಿ ನಡೆಸಲಾಗಿದೆ.
ಮೂರು ಪ್ರತ್ಯೇಕ ಆದೇಶಗಳ ಮೂಲಕ 3,285 ಐಸಿಯು ಕಾಟ್‌ಗಳನ್ನು ಖರೀದಿಸಲಾಗಿದೆ. 150 ಕಾಟ್‌ಗಳನ್ನು ತಲಾ ₹1.95 ಲಕ್ಷಕ್ಕೆ ನ್ಯೂಟೆಕ್ ಗ್ಲೋಬಲ್‌ನಿಂದ, 990 ಕಾಟ್‌ಗಳನ್ನು ತಲಾ ₹1.39 ಲಕ್ಷಕ್ಕೆ ಸೇವ್ ಮೆಡಿಕ್‌ನಿಂದ ಮತ್ತು 2,145 ಕಾಟ್‌ಗಳನ್ನು ತಲಾ ₹1.91 ಲಕ್ಷಕ್ಕೆ ನ್ಯೂಟೆಕ್ ಗ್ಲೋಬಲ್‌ನಿಂದ ಖರೀದಿಸಲಾಗಿದೆ.
ಈ ಮೂರೂ ಖರೀದಿಯ ಒಟ್ಟು ಮೊತ್ತ ₹57.68 ಕೋಟಿಯಾಗುತ್ತದೆ. ಆದರೆ ಕೊಟೇಷನ್‌ನಲ್ಲಿ ₹98,000 ಎಂದು ನಮೂದಿಸಿದ್ದ ಕಂಪನಿಯಿಂದಲೇ ಅಷ್ಟೂ ಕಾಟ್‌ಗಳನ್ನು ಖರೀದಿಸಿದ್ದರೆ, ಒಟ್ಟು ವೆಚ್ಚ ₹32.19 ಕೋಟಿಯಾಗುತ್ತಿತ್ತು. ಆದರೆ ₹25.49 ಕೋಟಿಯಷ್ಟು ಹೆಚ್ಚು ಪಾವತಿಸಿ, ಅಷ್ಟೇ ಕಾಟ್‌ಗಳನ್ನು ಖರೀದಿಸಲಾಗಿದೆ.
ಐಸಿಯು ಕಾಟ್‌ಗಳ ಖರೀದಿಯಲ್ಲಿ ಅಪಾರ ಪ್ರಮಾಣದ ಅಕ್ರಮವಾಗಿದೆ. ಖಾಸಗಿ ಕಂಪನಿಗಳಿಗೆ ಅಕ್ರಮ ಲಾಭ ಮಾಡಿಕೊಡುವ ಮತ್ತು ಆ ಮೂಲಕ ತಾವೂ ಅಕ್ರಮವಾಗಿ ಗಳಿಸಿಕೊಳ್ಳುವ ಉದ್ದೇಶದಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಹೆಚ್ಚಿನ ದರದಲ್ಲಿ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ಇದರಲ್ಲಿ ಯಾರಿಗೆಲ್ಲಾ ಲಾಭವಾಗಿದೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಬೇಕಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಇತರರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ವಸೂಲಿಯಾಗದ ದಂಡ
ಐಸಿಯು ಕಾಟ್‌ಗಳು ಮತ್ತು ಸೆಮಿ ಫ್ಲಾನ್ ಕಾಟ್‌ಗಳ ಖರೀದಿ ಆದೇಶ ನೀಡುವ ಸಂದರ್ಭದಲ್ಲಿ ಪೂರೈಕೆದಾರರಿಗೆ ‘ಏಳು ದಿನಗಳ ಒಳಗೆ ಪೂರೈಕೆ ಮಾಡಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುತ್ತದೆ’ ಎಂದು ಷರತ್ತು ಹಾಕಲಾಗಿತ್ತು. ಆದರೆ ತೀರಾ ವಿಳಂಬ ಮಾಡಿದ ಸಂದರ್ಭದಲ್ಲೂ ಅಧಿಕಾರಿಗಳು ದಂಡ ವಿಧಿಸದೇ, ಪೂರೈಕೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ವರದಿ ಹೇಳಿದೆ.
ಬಿಲ್‌ನಲ್ಲಿ ₹2.79 ಕೋಟಿ ವ್ಯತ್ಯಾಸ
ಐಸಿಯು ಕಾಟ್ ಮತ್ತು ಸೆಮಿ ಫ್ಲಾನ್ ಕಾಟ್‌ಗಳ ಪೂರೈಕೆ ಸಂಬಂಧ ನ್ಯೂಟೆಕ್ ಗ್ಲೋಬಲ್ ಕಂಪನಿಯು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ₹49.40 ಕೋಟಿಯ ಬಿಲ್ ಸಲ್ಲಿಸಿದೆ. ನಿರ್ದೇಶನಾಲಯವು ಸಹ ಅಷ್ಟೇ ಮೊತ್ತವನ್ನು ಪಾವತಿಸಿದೆ ಎಂಬ ವಿವರ ನ್ಯಾಯಮೂರ್ತಿ ಡಿಕುನ್ಹ ಆಯೋಗಕ್ಕೆ ಕಂಪನಿಯು ನೀಡಿರುವ ದಾಖಲೆಗಳಲ್ಲಿ ಇದೆ.
ಆದರೆ, ‘ನ್ಯೂಟೆಕ್ ಗ್ಲೋಬಲ್ ಕಂಪನಿಗೆ ₹52.19 ಕೋಟಿ ಬಿಲ್ ಪಾವತಿಸಲಾಗಿದೆ ಎಂದು ನಿರ್ದೇಶನಾಲಯವು ದಾಖಲೆ ಸಲ್ಲಿಸಿದೆ. ಈ ದಾಖಲೆಗಳ ಪ್ರಕಾರ ಬಿಲ್ ಸಲ್ಲಿಕೆಯಾಗದಿದ್ದರೂ, ₹2.79 ಕೋಟಿಯಷ್ಟು ಹೆಚ್ಚುವರಿ ಮೊತ್ತವನ್ನು ಕಂಪನಿಗೆ ಪಾವತಿಸಲಾಗಿದೆ. ಕಂಪನಿ ಮತ್ತು ನಿರ್ದೇಶನಾಲಯ ಸಲ್ಲಿಸಿರುವ ದಾಖಲೆಗಳಲ್ಲಿ ಈ ವ್ಯತ್ಯಾಸ ಏಕೆ ಬಂದಿದೆ ಹಾಗೂ ಅಷ್ಟು ದೊಡ್ಡ ಮೊತ್ತ ಯಾರಿಗೆ ಹೋಗಿದೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಬೇಕಿದೆ’ ಎಂದು ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.