ADVERTISEMENT

ಕೋವಿಡ್ ಅಕ್ರಮ ತನಿಖೆಯ ಹೂರಣ– 1 | ಸಿ.ಟಿ ಸ್ಕ್ಯಾನ್‌: ₹15.83 ಕೋಟಿ ಅಕ್ರಮ

ಜಯಸಿಂಹ ಆರ್.
Published 14 ನವೆಂಬರ್ 2024, 0:03 IST
Last Updated 14 ನವೆಂಬರ್ 2024, 0:03 IST
   

ಬೆಂಗಳೂರು: ಕೋವಿಡ್‌ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಅಗತ್ಯವೇ ಇಲ್ಲದ ಸಿ.ಟಿ ಸ್ಕ್ಯಾನ್‌ ಯಂತ್ರಗಳನ್ನು₹84.99 ಕೋಟಿ ವೆಚ್ಚದಲ್ಲಿ ಖರೀದಿಸಿದ್ದು, ಇದರಲ್ಲಿ ಒಟ್ಟು ₹15.83 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿಕುನ್ಹ ಆಯೋಗದ ವರದಿ ಹೇಳಿದೆ.

ಈ ಕುರಿತು ತನಿಖೆ ನಡೆಸಬೇಕು ಮತ್ತು ಸಂಬಂಧಿತ ಅಧಿಕಾರಿಗಳಿಂದ ನಷ್ಟದ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಕೋವಿಡ್‌ ನಿರ್ವಹಣೆ ಸಂದರ್ಭದ ಖರೀದಿಗೆ ಸಂಬಂಧಿಸಿದಂತೆ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಮೂರನೇ ಭಾಗದಲ್ಲಿ ಈ ಮಾಹಿತಿ ಇದೆ. 351 ಪುಟಗಳ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

‘ಕೊರೋನಾ ವೈರಾಣು ಪತ್ತೆಗೆ ಯಾವ ರೀತಿಯಲ್ಲೂ ನೆರವಿಗೆ ಬರದ 17 ಸಿ.ಟಿ ಸ್ಕ್ಯಾನ್‌ ಯಂತ್ರಗಳನ್ನು, ಕೋವಿಡ್‌ ನಿರ್ವಹಣೆಗಾಗಿ ಬಿಡುಗಡೆ ಮಾಡಿದ ಅನುದಾನದಲ್ಲೇ ಖರೀದಿಸಲಾಗಿದೆ. ಇದರಿಂದ ಕೋವಿಡ್‌ ನಿಯಂತ್ರಣಕ್ಕೆ ಯಾವ ಪ್ರಯೋಜನವೂ ಆಗಿಲ್ಲ’ ಎಂದು ವರದಿ ಹೇಳಿದೆ.

2020–2022ರ ನಡುವೆ ವಿವಿಧ ಜಿಲ್ಲಾಸ್ಪತ್ರೆಗಳಿಗೆಂದು 128 ಸ್ಲೈಸ್‌ ಸಾಮರ್ಥ್ಯದ 11 ಸಿ.ಟಿ ಸ್ಕ್ಯಾನ್‌ ಯಂತ್ರಗಳನ್ನು ಖರೀದಿಸಲಾಗಿದೆ. ಸೇವ್‌ ಮೆಡಿಟೆಕ್ ಸಿಸ್ಟಮ್ಸ್‌ ಎಂಬ ಕಂಪನಿಯು 2020ರ ಆಗಸ್ಟ್‌ನಲ್ಲಿ ಒಂದು ಯಂತ್ರವನ್ನು ₹4.92 ಕೋಟಿ ದರದಲ್ಲಿ ಪೂರೈಕೆ ಮಾಡಿದೆ. ಇದೇ ಕಂಪನಿ 2021ರ ಜೂನ್‌ನಲ್ಲಿ ಎರಡು ಯಂತ್ರಗಳನ್ನು ಅದೇ ದರದಲ್ಲಿ ಪೂರೈಸಿದೆ ಎಂಬ ಮಾಹಿತಿ ವರದಿಯಲ್ಲಿದೆ.

‘ಜಿಇಎಂ ಪೋರ್ಟಲ್‌ನಲ್ಲಿ ಈ ಯಂತ್ರಕ್ಕೆ ₹4.92 ಕೋಟಿ ಎಂದು ನಮೂದಾಗಿದೆ. ನಿಯಮಗಳ ಪ್ರಕಾರ ಸರ್ಕಾರಿ ಸಂಸ್ಥೆಗಳು ಈ ಯಂತ್ರಗಳನ್ನು ಅದೇ ದರದಲ್ಲಿ ಖರೀದಿಸಬೇಕು. ಸೇವ್‌ ಮೆಡಿಟೆಕ್‌ನಿಂದ ಮೂರು ಯಂತ್ರಗಳನ್ನು ಅದೇ ದರದಲ್ಲಿ ಖರೀದಿಸಿದ್ದರೂ, ಕೆಲವೇ ತಿಂಗಳ ಅಂತರದಲ್ಲಿ ಒಂದು ಕೋಟಿಗೂ ಹೆಚ್ಚು ದರ ನೀಡಿ ಏಳು ಯಂತ್ರಗಳನ್ನು ಖರೀದಿಸಲಾಗಿದೆ. ಇಲ್ಲಿ ಅಕ್ರಮ ನಡೆದಿದೆ’ ಎಂದು ವರದಿ ಹೇಳಿದೆ.

2021ರ ಅಕ್ಟೋಬರ್‌ನ 10ರಂದು ಫೋರ್ಸಸ್‌ ಹೆಲ್ತ್‌ಕೇರ್‌ ಕಂಪನಿಯು 2 ಯಂತ್ರಗಳನ್ನು ತಲಾ ₹6.10 ಕೋಟಿ ದರದಲ್ಲಿ ಪೂರೈಕೆಗೆ ಒಪ್ಪಿಕೊಂಡಿದೆ. ಮತ್ತು ಅದೇ ಅಕ್ಟೋಬರ್ 12ರಂದು ಇನ್ನೂ ಆರು ಯಂತ್ರಗಳನ್ನು ತಲಾ ₹5.95 ಕೋಟಿ ದರದಲ್ಲಿ ಪೂರೈಸಲು ಸಹಿ ಮಾಡಿದೆ. ₹4.92 ಕೋಟಿ ವೆಚ್ಚದಲ್ಲಿ ಖರೀದಿಸಬೇಕು ಎಂಬ ನಿಬಂಧನೆ ಇದ್ದರೂ, ಹೆಚ್ಚಿನ ದರಕ್ಕೆ ಖರೀದಿಸಿದ ಕಾರಣಕ್ಕೆ ₹8.55 ಕೋಟಿ ನಷ್ಟವಾಗಿದೆ ಎಂದು ವರದಿ ವಿವರಿಸಿದೆ.

ಮೇಲಿನ ಎರಡೂ ಕಂಪನಿಗಳು ಯಂತ್ರಗಳ ಪೂರೈಕೆ ಮತ್ತು ಅಳವಡಿಕೆಯಲ್ಲಿ ಹಲವು ತಿಂಗಳ ವಿಳಂಬ ಮಾಡಿದ್ದು, ಅವುಗಳಿಂದ ₹7.28 ಕೋಟಿ ದಂಡ ವಸೂಲಿ ಮಾಡಬೇಕಿತ್ತು. ಅಧಿಕಾರಿಗಳು ದಂಡ ವಸೂಲಿ ಮಾಡದೇ ಇದ್ದ ಕಾರಣಕ್ಕೆ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ವರದಿ ಹೇಳಿದೆ.

‘ಷರತ್ತು ಬದಲು: ಫೋರ್ಸಸ್‌ಗೆ ಲಾಭ ’

‘128 ಸ್ಲೈಸ್‌ ಸಾಮರ್ಥ್ಯದ ಸಿ.ಟಿ ಸ್ಕ್ಯಾನ್‌ ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆ ಪಿಲಿಫ್ಸ್‌ ಇಂಡಿಯಾ 128 ಸ್ಲೈಸ್‌ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ, ಫೋರ್ಸಸ್‌ ಹೆಲ್ತ್‌ಕೇರ್‌ 160 ಸ್ಲೈಸ್‌ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ ಬಿಡ್‌ ಸಲ್ಲಿಸಿದ್ದವು. ವೈದ್ಯಕೀಯ ಶಿಕ್ಷಣ ಇಲಾಖೆಯು ಟೆಂಡರ್‌ ಷರತ್ತು ಬದಲಿಸುವ ಮೂಲಕ ಫೋರ್ಸಸ್‌ ಕಂಪನಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ವರದಿ ಆಪಾದಿಸಿದೆ.

ಮೂಲ ಟೆಂಡರ್‌ನಲ್ಲಿ ‘128 ಸ್ಲೈಸ್‌ ಸಾಮರ್ಥ್ಯದ’ ಎಂದು ಉಲ್ಲೇಖಿಸಲಾಗಿತ್ತು. ಬಿಡ್‌ ಸಲ್ಲಿಕೆ ನಂತರ ಫೋರ್ಸಸ್‌ ಕಂಪನಿಗೆ ಅನುಕೂಲ ಮಾಡಿಕೊಡಲು, ‘128 ಸ್ಲೈಸ್‌ ಮತ್ತು ಅದಕ್ಕಿಂತಲೂ ಹೆಚ್ಚು ಸಾಮರ್ಥ್ಯದ’ ಎಂದು ಬದಲಿಸಲಾಗಿದೆ ಎಂದು ವರದಿ ಹೇಳಿದೆ.

ಇದರ ವಿರುದ್ಧ ಪಿಲಿಫ್ಸ್‌ ಕಂಪನಿ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ 2022ರ ಜುಲೈನಲ್ಲಿ ನೂತನ ಆದೇಶ ಹೊರಡಿಸಿದರು. ಇದರಿಂದ ಪಿಲಿಫ್ಸ್‌ ಕಂಪನಿಯ ಅರ್ಜಿ ತಿರಸ್ಕೃತವಾಯಿತು ಎಂದು ವರದಿ ಹೇಳಿದೆ.

ಒಟ್ಟಾರೆ ಫೋರ್ಸಸ್‌ ಕಂಪನಿಗೆ ಅನುಕೂಲ ಮಾಡಿಕೊಡಲು ನಿಯಮಗಳನ್ನು ಹಲವು ಬಾರಿ ಉಲ್ಲಂಘಿ ಸಲಾಗಿದೆ. ಕಂಪನಿಗೆ ಲಾಭ ಮಾಡಿಕೊಡುವ ಉದ್ದೇಶ ಮಾತ್ರವಲ್ಲದೇ, ಅಧಿಕಾರಿಗಳು ಮತ್ತು ಇತರರು ತಾವು ಲಾಭ ಮಾಡಿಕೊಳ್ಳಲು ಹೀಗೆ ಮಾಡಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.