ADVERTISEMENT

ಕೋವಿಡ್ ಅಕ್ರಮ ಆರೋಪ: ಯಡಿಯೂರಪ್ಪ, ಶ್ರೀರಾಮುಲುಗೆ ಸಂಕಷ್ಟ?

ಬೊಕ್ಕಸಕ್ಕೆ ₹14.21 ನಷ್ಟ; ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ನ್ಯಾ. ಡಿ.ಕುನ್ಹಾ ಆಯೋಗ ಶಿಫಾರಸು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 23:30 IST
Last Updated 9 ನವೆಂಬರ್ 2024, 23:30 IST
ಶ್ರೀರಾಮುಲು ಮತ್ತು ಬಿ.ಎಸ್.ಯಡಿಯೂರಪ್ಪ
ಶ್ರೀರಾಮುಲು ಮತ್ತು ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಕೋವಿಡ್ ನಿರ್ವಹಣೆಗಾಗಿ ಪಿಪಿಇ ಕಿಟ್ ಖರೀದಿ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ ಹಾಗೂ ವೈಯಕ್ತಿಕ ಲಾಭ ಪಡೆದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಮೂರ್ತಿ ಮೈಕಲ್‌ ಡಿ.ಕುನ್ಹಾ ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

‘ಕೋವಿಡ್‌ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು, ಅಧಿಕಾರಿಗಳ ಶಿಫಾರಸುಗಳನ್ನು ಬದಿಗೊತ್ತಿ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ’ ಎಂದೂ ಆಯೋಗದ ವರದಿ ಉಲ್ಲೇಖಿಸಿದೆ.

ಕೋವಿಡ್ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ನ್ಯಾ. ಡಿ.ಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯ 14 ಪುಟಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ. ಈ ವರದಿ ಅಕ್ರಮ ನಡೆದ ಬಗೆಯನ್ನು ವಿವರಿಸಿದೆ.

ADVERTISEMENT

‘ನಿರ್ಲಕ್ಷ್ಯ ಹಾಗೂ ವೈಯಕ್ತಿಕ ಲಾಭ ಮಾಡಿಕೊಂಡ ಇಬ್ಬರ ವಿರುದ್ಧವೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌–7 ಮತ್ತು ಸೆಕ್ಷನ್‌–11ರ ಅಡಿ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿದೆ.

ವರದಿಯಲ್ಲಿ ಏನಿದೆ?

‘₹330ರಿಂದ ₹750ರ ದರದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಲು ದೇಶೀಯ ಕಂಪನಿಗಳು ಸಿದ್ದವಿದ್ದವು. ಈ ಕಂಪನಿಗಳಿಂದಲೇ ಕಿಟ್‌ ಖರೀದಿಸಬೇಕು ಎಂದು ಅಧಿಕಾರಿಗಳು ಶಿಫಾರಸು ಮಾಡಿದ್ದರೂ, ಅದನ್ನು ಬದಿಗೊತ್ತಲಾಗಿದೆ. ₹2,049ರಿಂದ ₹2,117 ದರದಲ್ಲಿ 3 ಲಕ್ಷ ಕಿಟ್‌ಗಳನ್ನು ಚೀನಾದ ಕಂಪನಿಗಳಿಂದ ಖರೀದಿಸುವ ಒಪ್ಪಂದಕ್ಕೆ ಸ್ವತಃ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಸಹಿ ಹಾಕಿದ್ದಾರೆ. ಮೂಲ ಖರೀದಿ ನಿಯಮಗಳು ಮತ್ತು ಕಾರ್ಯವಿಧಾನ ಅನುಸರಿಸದೆ, ಟೆಂಡರ್‌ ಕರೆಯದೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ಅಪಾರವಾದ ನಷ್ಟ ಉಂಟು ಮಾಡಿದ್ದಾರೆ’ ಎಂದು ಆಯೋಗ ಆರೋಪಿಸಿದೆ.

‘2020ರ ಏಪ್ರಿಲ್‌ನಲ್ಲಿ ಚೀನಾದ ಡಿಎಚ್‌ಬಿ ಗ್ಲೋಬಲ್‌ ಹಾಂಗ್‌ಕಾಂಗ್‌ ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್ ಕಂಪನಿಗಳ ಜತೆ ₹62.71 ಕೋಟಿಗೆ ಮಾಡಿಕೊಂಡ ಒಪ್ಪಂದದಲ್ಲಿ ಎಲ್ಲ ಸ್ವರೂಪದ ಸಾಗಣೆ ವೆಚ್ಚವೂ ಸೇರಿತ್ತು. ಹೀಗಿದ್ದೂ, ಈ ಎರಡೂ ಕಂಪನಿಗಳಿಗೆ ಹೆಚ್ಚುವರಿಯಾಗಿ ಒಟ್ಟು ₹14.21 ಕೋಟಿ ಸಾಗಣೆ ವೆಚ್ಚ ನೀಡಲಾಗಿದೆ. ಇವೆಲ್ಲವೂ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಕಣ್ಗಾವಲಿನಲ್ಲೇ ನಡೆದಿದೆ’ ಎಂದು ವರದಿ ವಿವರಿಸಿದೆ.

‘ಅಧಿಕಾರಿಗಳ ಆಕ್ಷೇಪದ ಹೊರತಾಗಿಯೂ, ಈ ಕಂಪನಿಗಳಿಗೆ ಶೇ 50ರಷ್ಟು ಮುಂಗಡ ನೀಡಲಾಗಿದೆ ಎಂದು ದಾಖಲೆಗಳ ಪರಿಶೀಲನೆ ವೇಳೆ ಗೊತ್ತಾಗಿದೆ. ಜತೆಗೆ ಎಲ್ಲ ಕಿಟ್‌ಗಳನ್ನು ಪೂರೈಸುವ ಮುನ್ನವೇ ಒಪ್ಪಂದದ ಪೂರ್ಣ ಹಣವನ್ನು ಪಾವತಿ ಮಾಡಲಾಗಿದೆ. ವಿತರಣೆ ಮಾಡಲು ವಿಳಂಬ ಮಾಡಿದ್ದಕ್ಕೆ ವಿಧಿಸಲಾಗಿದ್ದ ₹1.53 ಕೋಟಿ ದಂಡವನ್ನೂ ವಸೂಲಿ ಮಾಡಿಲ್ಲ. ಈ ಎಲ್ಲಾ ಹಂತಗಳಲ್ಲಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು, ಪೂರೈಕೆದಾರರ ಮೂಲಕ ವೈಯಕ್ತಿಕ ಲಾಭ ಪಡೆದುಕೊಂಡಿದ್ದಾರೆ’ ಎಂದು ಆಯೋಗ ಆರೋಪಿಸಿದೆ.

ಕೋವಿಡ್ ಸಾಂಕ್ರಾಮಿಕವು ರಾಜ್ಯವನ್ನು ಕಾಡಿದಾಗ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕೋವಿಡ್ ಅಕ್ರಮದ ತನಿಖೆಗೆ ಆಯೋಗವನ್ನು ರಚಿಸಿತ್ತು. ಆಯೋಗವು ಕಳೆದ ಆ 31ರಂದು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿತ್ತು. ಸಚಿವ ಸಂಪುಟದ ಉಪಸಮಿತಿ ವರದಿಯನ್ನು ಪರಿಶೀಲಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.