ADVERTISEMENT

ಕೋವಿಡ್‌: ₹187 ಕೋಟಿ ವಸೂಲಿಗೆ ಶಿಫಾರಸು; ನ್ಯಾ. ಡಿಕುನ್ಹ ವರದಿಯಲ್ಲಿ ಉಲ್ಲೇಖ

ಅಪರಾಧ ಪ್ರಕರಣ ದಾಖಲಿಸಿ: ನ್ಯಾಯಮೂರ್ತಿ ಡಿಕುನ್ಹ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:29 IST
Last Updated 12 ನವೆಂಬರ್ 2024, 16:29 IST
   

ಬೆಂಗಳೂರು: ಕೋವಿಡ್‌ ನಿರ್ವಹಣೆಗಾಗಿ ನಡೆದ ಖರೀದಿಯಲ್ಲಿ ನಿಯಮಗಳ ಉಲ್ಲಂಘನೆಯಿಂದ ಅಪಾರ ನಷ್ಟವಾಗಿದ್ದು, ಅದರಲ್ಲಿ ₹187.8 ಕೋಟಿಯವನ್ನು ವಸೂಲಿ ಮಾಡಬೇಕು. ಈ ಖರೀದಿ ಒಪ್ಪಂದ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಮೂರ್ತಿ ಮೈಕಲ್‌ ಡಿಕುನ್ಹ ಆಯೋಗವು ಶಿಫಾರಸು ಮಾಡಿದೆ.

ಕೋವಿಡ್‌ ನಿರ್ವಹಣೆಗಾಗಿ ನಡೆಸಿದ ಖರೀದಿಯಲ್ಲಿನ ಅಕ್ರಮ ಪತ್ತೆಗೆ ರಾಜ್ಯ ಸರ್ಕಾರವು ರಚಿಸಿದ್ದ ಆಯೋಗವು ಸಲ್ಲಿಸಿರುವ ವರದಿಯ ಕೆಲಭಾಗಗಳು ಮತ್ತು ಅದರ ಮೇಲೆ ಕ್ರಮ ತೆಗೆದುಕೊಳ್ಳಲು ಸಿದ್ಧಪಡಿಸಿರುವ ಟಿಪ್ಪಣಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಅವುಗಳಲ್ಲಿ ಈ ಮಾಹಿತಿ ಇದೆ.

ಔಷಧಗಳು ಮತ್ತು ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಹಲವು ಅಕ್ರಮಗಳು ನಡೆದಿವೆ. ಟೆಂಡರ್‌ ಕರೆಯದೇ ಖರೀದಿ ಒಪ್ಪಂದ, ಅವಧಿ ಮುಗಿದ ಔಷಧಗಳ ಪೂರೈಕೆ, ಮಾರುಕಟ್ಟೆ ದರಕ್ಕಿಂತ ಹಲವು ಪಟ್ಟು ಹೆಚ್ಚು ದರ ನೀಡಿ ಪರಿಕರಗಳ ಖರೀದಿ, ಅನುಮತಿ ನೀಡಲಾಗಿದ್ದಕ್ಕಿಂತ ಹೆಚ್ಚು ಸಿಬ್ಬಂದಿ ನೇಮಕ ಮೊದಲಾದ ರೂಪದಲ್ಲಿ ₹187.8 ಕೋಟಿ ನಷ್ಟ ಉಂಟು ಮಾಡಲಾಗಿದೆ ಎಂದು ವರದಿಯ ವಿವಿಧ ಭಾಗಗಳಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ರಾಜ್ಯ ಆರೋಗ್ಯ ಇಲಾಖೆಯ ಸುಪರ್ದಿಯಲ್ಲಿ ಒಟ್ಟು ₹1,754 ಕೋಟಿ ವೆಚ್ಚ ಮಾಡಲಾಗಿದೆ. ಇಲ್ಲಿ ನಡೆಸಲಾದ 13 ಖರೀದಿಗಳಲ್ಲಿ ಅಕ್ರಮ ನಡೆದಿದ್ದು, ಸಂಬಂಧಿತ ಕಂಪನಿಗಳಿಂದ ₹17.84 ಕೋಟಿ ವಸೂಲಿ ಮಾಡಬೇಕು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮೂಲಕ ನಡೆಸಲಾದ ₹1,963.62 ಮೊತ್ತದ ಖರೀದಿಯಲ್ಲಿ, ₹170 ಕೋಟಿ ಅಕ್ರಮ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ.

ಒಟ್ಟು 85 ಖರೀದಿ ಒಪ್ಪಂದಗಳಲ್ಲಿ 21 ಕಂಪನಿಗಳು ಭಾಗಿಯಾಗಿವೆ. ಈ ಕಂಪನಿಗಳಿಂದ ನಷ್ಟದ ಮೊತ್ತವನ್ನು ವಸೂಲಿ ಮಾಡಬೇಕು. ಅಕ್ರಮ ಎಸಗುವಲ್ಲಿ ಅಧಿಕಾರಿಗಳು ಮತ್ತು ಇತರರ ಪಾತ್ರ ಏನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಬೇಕು. ಈ ಪ್ರಕರಣಗಳಲ್ಲಿ ಉನ್ನತ ತನಿಖೆ ಅಥವಾ ಅಪರಾಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಇದರ ಆಧಾರದಲ್ಲಿ ಕ್ರಮ ತಗೆದುಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.

‘ವರದಿಯ ಎರಡನೇ ಭಾಗದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಮತ್ತು ಅದರಲ್ಲಿ ಬಳಕೆಯಾದ ಹಣದ ವಿವರ ಇದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಮತ್ತು ಕೋವಿಡ್‌ ತುರ್ತು ಪ್ರತಿಸ್ಪಂದನಾ ಯೋಜನೆಗಳ ಅನುಷ್ಠಾನದಲ್ಲಿ ಒಟ್ಟು ₹446 ಕೋಟಿಯನ್ನು ವೆಚ್ಚ ಮಾಡಿಯೇ ಇಲ್ಲ. ಇಷ್ಟು ದೊಡ್ಡ ಮೊತ್ತ ಲಭ್ಯವಿದ್ದರೂ ಅದನ್ನು ಬಳಸಿಕೊಳ್ಳದೆ ವ್ಯರ್ಥ ಮಾಡಲಾಗಿದೆ’ ಎಂದು ಆಯೋಗದ ವರದಿ ಹೇಳಿದೆ.

ಬಿಎಸ್‌ವೈ ಅವಧಿಯ ಒಪ್ಪಂದದ ಉಲ್ಲೇಖ

ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಮತ್ತು ಬಿ.ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ, ಇಬ್ಬರೂ ಅಧಿಕಾರ ದುರುಪಯೋಗದ ಮೂಲಕ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಆ ಅವಧಿಯಲ್ಲಿ ಖರೀದಿ ಮಾಡಲಾದ ಚೀನಾದ ಕಂಪನಿಯಿಂದಲೂ ವಸೂಲಿ ಮಾಡಬೇಕು ಎಂಬ ಶಿಫಾರಸು ಆಯೋಗದ ವರದಿಯಲ್ಲಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿನ ಕೆಲ ಖರೀದಿ ಒಪ್ಪಂದಗಳೂ ವಸೂಲಿ ಮಾಡಬೇಕಾದ ಪಟ್ಟಿಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.