‘ಅಣ್ಣ ನಾವು ಹೇಳಿದ್ಹಾಂಗ ಯಾರೂ ಬಿಲ್ಕುಲ್ ಮಾಡುದಿಲ್ಲ; ನಾವು ಮಾಡಿದಾಗ ಮಾತ್ರ ಮಾಡೇ ಮಾಡ್ತಾರ. ಹಂಗಾಗಿ, ‘ವೃಕ್ಷ ಯೋಗ’ ಶುರು ಮಾಡಿದೆವು’ – ರಾಮಣ್ಣನ ಮಾತು ಕೇಳಿ, ಅವರ ಕೆಲಸ ನೋಡಬೇಕು ಅಂತ ಆಸಕ್ತಿ ಅರಳಿತು.
ಧಾರವಾಡದಿಂದ 14 ಕಿ.ಮೀ. ದೂರದ ಅಮ್ಮಿನಬಾವಿಗೆ ದ್ವಿಚಕ್ರ ವಾಹನ ಏರಿ ಹೊರಟೆವು. ಗುಡ್ಡ ಮುಟ್ಟಿದಾಗ ತೋಯ್ದು ಗುಬ್ಬಚ್ಚಿಯಂತಾಗಿದ್ವಿ. ಆ ಹೊತ್ತಿಗಾಗಲೇ ಅಮ್ಮಿನಬಾವಿಯ ಯುವಜನತೆಯ ಶ್ರಮದಾನ ಶುರುವಾಗಿತ್ತು. ಲಾಕ್‌ಡೌನ್/ಅನ್‌ಲಾಕ್ ಅವಧಿಯಲ್ಲಿ ಅಮ್ಮಿನಬಾವಿಯ ಬೋಳುಗುಡ್ಡದಲ್ಲಿ ಹಸಿರು ಉಕ್ಕಿಸುವುದು ಈ ತಂಡದ ಉದ್ದೇಶವಾಗಿತ್ತು.
ಲೆಕ್ಕ ಪರಿಶೋಧಕ ರಾಮಚಂದ್ರ ದೇಶಪಾಂಡೆ ಹಾಗೂ ಎಂಜಿನಿಯರ್ ಮಧುಮತಿ ಕರ್ಕಿ ಅವರ ನೇತೃತ್ವದಲ್ಲಿ 35 ಯುವಕ-ಯುವತಿಯರ ತಂಡ ಈ ಕಾರ್ಯಕ್ಕೆ ಮನಸ್ಸು ಮಾಡಿತು. ಆರಂಭದಲ್ಲಿ ಎಂಟು– ಹತ್ತು ಮಂದಿ ನಿತ್ಯ ಬೆಳಿಗ್ಗೆ 5.30ಕ್ಕೆ ಗುಡ್ಡದಲ್ಲಿ ಯೋಗ; ಬಳಿಕ 6ರಿಂದ 8 ಗಂಟೆಯವರೆಗೆ ಅಲ್ಲಿ ಸಾಮೂಹಿಕ ಶ್ರಮದಾನ. ಸಂಪೂರ್ಣ ಬಂಡೆಗಲ್ಲುಗಳಿಂದ ಆವೃತವಾದ ಬೆಟ್ಟದಲ್ಲಿ ಎಲ್ಲರೂ ಬೆವರು ಹರಿಸಿದ್ದೇ ಹರಿಸಿದ್ದು. 21 ದಿನಗಳ ಶ್ರಮದಾನದ ಮೂಲಕ ಪಾಳು ಗುಡ್ಡದಲ್ಲಿ ಸಸ್ಯ ಶ್ಯಾಮಲೆಯ ಹಸಿರು ಹೊದಿಕೆ ಹೆಚ್ಚಿಸಿದ್ದು ಸಾಧನೆ.
‘ಲಾಕ್‍ಡೌನ್ ಆಗಿ ಒಂದು ವಾರ ಭಾಳ ಮಜಾ ಅನ್ನಿಸಿತ್ತು; ನಂತರ ದೈನಂದಿನ ಶೆಡ್ಯೂಲ್ ಕ್ರಮೇಣ ಹೇರಾಪೇರಿ ಆಯ್ತು. 8 ರಿಂದ 9ಕ್ಕ ಏಳೋದು. ಹೊತ್ತು, ಗೊತ್ತಿಲ್ಲೇನು? ಅಂತ ಮನ್ಯಾಗ ಬೈಸಿಕೊಳ್ಳೋದು ಬ್ಯಾಸರ ಆಗಿತ್ತು. ಅದೇ ಟೈಮ್‌ಗೆ ರಾಮಣ್ಣ ಮತ್ತ ಮಧು ಅಕ್ಕ ಕಳೆ ಕಿತ್ತು, ಸಸಿ ನೆಡೋ ಪ್ರೋಗ್ರಾಂ ಬಗ್ಗೆ ಹೇಳಿದ್ರು. ಎರಡ ತಾಸು ವ್ಯಾಯಾಮ ಆದೀತು ಅಂತ ಅಣ್ಣ-ತಮ್ಮ ಇಬ್ಬರೂ ಕೈ ಜೋಡಿಸಿದ್ವಿ. ಹುಡುಗ್ರು-ಹುಡಗ್ಯಾರು ದಿನಾ ಬರ್ಲಿಕ್ಕೆ ಶುರು ಮಾಡಿದ್ವಿ. ಗುಡ್ಡದ ಅಂಚಿಗೆ ಬಯಲಿಗೆ ಅಂತ ಶೌಚಕ್ಕೆ ಬರ್ತಿದ್ದವರು ಕ್ರಮೇಣ ಕಡಿಮಿ ಮಾಡಿದ್ರು. ನಾವು ಶ್ರಮದಾನ ಮುಂದುವರಿಸೋಣ ಅಂತ ತೀರ್ಮಾನ ಮಾಡಿದ್ವಿ’ ಅಂದ್ರು ತಂಡದಲ್ಲಿದ್ದ ಬಿ. ಫಾರ್ಮಾ ವಿದ್ಯಾರ್ಥಿ ನವೀನ್ ಪದಕಿ.
ಗುಡ್ಡದಲ್ಲಿ ಆಳೆತ್ತರ ಬೆಳೆದು ನಿಂತ ಕಳೆ ಕೀಳಲು ಸುಮಾರು 10– 12 ದಿನಗಳೇ ಬೇಕಾದವು. ಈ ಶ್ರಮಾದಾನದ ವಿಷಯ ಹಬ್ಬಿ, ಕ್ರಮೇಣ ಪರಿಸರಾಸಕ್ತ ಸ್ವಯಂಸೇವಕರ ಸಂಖ್ಯೆಯೂ ಗಣನೀಯವಾಗಿ ಏರಿತು. ಅಷ್ಟರಲ್ಲಿ ವಿಶ್ವ ಯೋಗ ದಿನ (ಜೂನ್ 21, ಭಾನುವಾರ) ಹೊಸ್ತಿಲಲ್ಲಿತ್ತು. ಹೀಗಾಗಿ, ಸ್ವಚ್ಛಗೊಂಡ ಗುಡ್ಡದಲ್ಲಿ 21 ದಿನಗಳವರೆಗೆ ನಿರಂತರವಾಗಿ ‘ವೃಕ್ಷ ಯೋಗ’ದಡಿ ಸಸಿ ನೆಡುವ, ನೆಟ್ಟ ಗಿಡಗಳನ್ನು ಪೋಷಿಸುವ ಕೆಲಸಕ್ಕೆ ತಂಡ ಚಾಲನೆ ನೀಡಿತು. ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅರಣ್ಯ ಇಲಾಖೆಯ ನರ್ಸರಿಯಿಂದ250 ವಿವಿಧ ಸಸಿಗಳನ್ನು ಉಚಿತವಾಗಿ ಕೊಡಿಸಿದರು. ಖಾಸಗಿ ನರ್ಸರಿಗಳಿಂದ ಸ್ವಯಂ ಸೇವಕರೇ ₹60– 70ರಂತೆ ಹೂವು ಮತ್ತು ಹಣ್ಣಿನ ಗಿಡಗಳನ್ನು ಖರೀದಿಸಿ ತಂದರು. 550ಕ್ಕೂ ಹೆಚ್ಚು ವಿವಿಧ ಪ್ರಜಾತಿಯ ಗಿಡಗಳನ್ನು ನೆಟ್ಟರು.
ಬೋಳಾಗಿದ್ದ ಗುಡ್ಡದಲ್ಲಿ ಈಗ ಜೀವ ಕಳೆ. ಎಲ್ಲೆಲ್ಲೂ ಹಸಿರೇ ಉಸಿರು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಕೈಗೆ ಸ್ಯಾನಿಟೈಜರ್ ಉಜ್ಜಿಕೊಂಡೇ ತಗ್ಗು ತೋಡಿ ಗಿಡ ನೆಟ್ಟವರ ಪೈಕಿ ಶಿವರಾಜ ಪತ್ತಾರ, ಸಂಜೀವ ವಾಡ್ಕರ್, ಮಂಜು ಕರ್ಕಿ, ಗೋಪಿ ಹಾಗೂ ಸುನೀಲ ಕಾಶಿ, ಯಲ್ಲಪ್ಪಾ ಜಾನಕೂನವರ, ಬಿ.ಎಂ. ಪ್ರಕಾಶ, ನಾಗೇಂದ್ರ ನವಲಗುಂದ, ಸಮೀರ ದೇಶಪಾಂಡೆ ಅವರ ಶ್ರಮ ದೊಡ್ಡದು. ಶ್ರಮಾದಾನ ಮಾಡಿದ ಈ ತಂಡಕ್ಕೆ ನಿತ್ಯರುಚಿಯಾದ ಉಪಾಹಾರ ಸಿದ್ಧಪಡಿಸಿದ್ದು ಸಂಜೀವ ಮತ್ತು ಗಣಪತಿ.
ಒಮ್ಮೆ ಈ ಕಾಡು ತೋಟಕ್ಕೆ ಭೇಟಿ ನೀಡಿ, ಸಿದ್ದಪ್ಪ ಗೋಸಲ ಅವರು ಮಾಡೋ ಸಿದ್ದಪ್ಪಜ್ಜನ ಪೂಜೆ ನೋಡಿಬನ್ನಿ!
ವೈವಿಧ್ಯಮಯ ಗಿಡಗಳ ನಾಟಿ
ಈ ತಂಡವರು ನಿತ್ಯ 15 ತಗ್ಗುಗಳನ್ನು ಕಡಿದು ನೇರಳೆ, ಬದಾಮಿ, ಶ್ರೀಗಂಧ, ಹುಲಗಲ, ಹೆಬ್ಬೇವು, ಆಲ, ಅತ್ತಿ, ಬಸರಿ, ಪೇರಲ, ಚಿಕ್ಕು, ಪಪ್ಪಾಯ, ಬಾಳೆ, ನುಗ್ಗೆ, ದಾಸವಾಳ, ಗುಲಾಬಿ, ಮಲ್ಲಿಗೆ ಸಸಿಗಳನ್ನು ನೆಟ್ಟಿದ್ದಾರೆ. ಸುದೈವದಿಂದ ಎರಡ್ಮೂರು ದೊಡ್ಡ ಮಳೆಯಾಗಿ, ಕಲ್ಲು ಗುಡ್ಡದಲ್ಲಿಯೂ 550ಕ್ಕೂ ಹೆಚ್ಚು ವಿವಿಧ ಪ್ರಜಾತಿಯ ಗಿಡಗಳು ಬೇರು ಬಿಟ್ಟು, ಚಿಗುರಿವೆ. ಶ್ರಮದಾನ ಮಾಡಿದವರಿಗೆ ಸಂತೃಪ್ತಿ ಮೂಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.