ADVERTISEMENT

ಕೋವಿಡ್‌: ರಾಜ್ಯದಲ್ಲಿ ಮನೆ–ಮನೆ ಸಮೀಕ್ಷೆ; ಅಪಾಯದ ವರ್ಗದಲ್ಲಿ 63.85 ಲಕ್ಷ ಜನತೆ

ಸಮೀಕ್ಷೆಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 21:50 IST
Last Updated 26 ಜೂನ್ 2020, 21:50 IST
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ 63.85 ಲಕ್ಷ ಜನತೆ ಅಪಾಯದ ವರ್ಗದಲ್ಲಿದ್ದಾರೆ ಎಂದು ಗುರುತಿಸಲಾಗಿದೆ.

ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮನೆ-ಮನೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಜನರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವೇಳೆ ಸೋಂಕು ಲಕ್ಷಣಗಳು ಕಾಣಿಸಿಕೊಂಡವರನ್ನು ಫಿವರ್ ಕ್ಲಿನಿಕ್‌ಗಳಿಗೆ ಕಳುಹಿಸಿ, ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಂಕು ದೃಢಪಟ್ಟಲ್ಲಿ ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ.ಸಮುದಾಯದ ಮಟ್ಟದಲ್ಲಿ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ ಶೇ 91.23ರಷ್ಟು (ಜೂ.23) ಮನೆಗಳ ಸಮೀಕ್ಷೆ ನಡೆದಿದೆ.

ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಸಮೀಕ್ಷೆ ಅಂತಿಮ ಹಂತದಲ್ಲಿದೆ. ಹಾಸನ, ಉತ್ತರ ಕನ್ನಡ, ಧಾರವಾಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದೆ. 60 ವರ್ಷ ಮೇಲ್ಪಟ್ಟವರು, ಶೀತ–ಜ್ವರದಿಂದ ಬಳಲುತ್ತಿರುವವರು, ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಹಾಗೂ ಸೋಂಕು ಶಂಕಿತರನ್ನು ಗುರುತಿಸಿ, ಅವರನ್ನು ಅಪಾಯದ ವರ್ಗದ ಪಟ್ಟಿಗೆ ಸೇರಿಸಲಾಗಿದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸೂಚಿಸಲಾಗಿದೆ.

ADVERTISEMENT

ಬೆಂಗಳೂರಿನಲ್ಲಿ ಅತೀ ಹೆಚ್ಚು ಮಂದಿ (7.46 ಲಕ್ಷ ಮಂದಿ) ಅಪಾಯದ ವರ್ಗದಲ್ಲಿದ್ದಾರೆ ಎಂದು ಗುರುತಿಸಲಾಗಿದೆ. ಅದೇ ರೀತಿ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ತುಮಕೂರಿನಲ್ಲಿ ಕೂಡ 3 ಲಕ್ಷಕ್ಕೂ ಅಧಿಕ ಮಂದಿ ಈ ವರ್ಗದಲ್ಲಿರುವುದು ಬೆಳಕಿಗೆ ಬಂದಿದೆ. ಸಮೀಕ್ಷೆ ವೇಳೆ ರಾಜ್ಯದಲ್ಲಿ 1.78 ಲಕ್ಷ ಮಂದಿ ಶೀತ, ಜ್ವರ ಹಾಗೂ ಕೆಮ್ಮಿನ ಸಮಸ್ಯೆ ಎದುರಿಸುತ್ತಿದ್ದಾರೆ.

21 ಸಾವಿರ ಮಂದಿಗೆ ಲಕ್ಷಣ: ಸಮೀಕ್ಷೆಯ ವೇಳೆ ಬೆಂಗಳೂರಿನಲ್ಲಿ 3 ಸಾವಿರ ಸೇರಿದಂತೆ ರಾಜ್ಯದಲ್ಲಿ ಒಟ್ಟು 21,391 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿರುವುದು ಪತ್ತೆಯಾಗಿದೆ. ಇದು ಕೊರೊನಾ ಸೋಂಕಿನ ಲಕ್ಷಣ ಆಗಿರುವುದರಿಂದ ಕೋವಿಡ್ ಪರೀಕ್ಷೆಗೆ ಸೂಚಿಸಲಾಗಿದೆ. 15.91 ಲಕ್ಷ ಮಂದಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 4.88 ಲಕ್ಷ ಗರ್ಭಿಣಿಯರು ಹಾಗೂ ಬಾಣಂತಿಯರು ಇದ್ದಾರೆ.

‘ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಜನತೆಗೆ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ಜತೆಗೆ ಅನಾರೋಗ್ಯ ಸಮಸ್ಯೆ ಇರುವವರನ್ನು ಪರೀಕ್ಷೆಗೆ ಫಿವರ್‌ ಕ್ಲಿನಿಕ್‌ಗಳಿಗೆ ಕಳುಹಿಸಲಾಗಿದೆ. ಸೋಂಕು ಲಕ್ಷಣಗಳು ಇರುವವರ ಮೇಲೆ ನಿಗಾ ಇಡಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.