ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಇಲ್ಲಿರುವ ನಿವಾಸಕ್ಕೆ ಸೋಮವಾರ ಸಂಜೆ ಆಗಮಿಸಿದ ಸಿ.ಪಿ. ಯೋಗೇಶ್ವರ್ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಸ್ವೀಕರಿಸಿರುವುದಾಗಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.
ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಪಿ. ಯೋಗೇಶ್ವರ್, ‘ಚನ್ನಪಟ್ಟಣ ಉಪ ಚುನಾವಣೆಗೆ ಸ್ಪರ್ಧಿಸುವುದು ಖಚಿತ’ ಎಂದು ತಿಳಿಸಿದರು.
‘ಬಿಜೆಪಿ ಪಕ್ಷದಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಈ ಭಾಗದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೇನೆ. ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂದು ಬಯಸಿದ್ದೇನೆ. ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.
‘ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಬಗ್ಗೆ ಈ ಕ್ಷಣದವರೆಗೆ ನಿರ್ಧರಿಸಿಲ್ಲ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ನಾಳೆ ನಮ್ಮ ಕಾರ್ಯಕರ್ತರ ಜೊತೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಬಿಜೆಪಿಯಿಂದ ಸ್ಪರ್ಧಿಸಲು ನನ್ನ ಮೊದಲ ಆದ್ಯತೆ. ಕಾಂಗ್ರೆಸ್ ಬಗ್ಗೆ ಯೋಚಿಸಿಲ್ಲ. ನಾನಿನ್ನೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ' ಎಂದು ತಿಳಿಸಿದರು.
‘ಬಿಜೆಪಿ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅನುಕೂಲವಾಗಲೆಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ತಿಳಿಸಿದರು.
‘ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಈ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಅವರ ಕ್ಷೇತ್ರವಾಗಿರುವುದರಿಂದ ಅವರ ಒಪ್ಪಿಗೆಯೂ ಬೇಕಾಗುತ್ತದೆ. ಇನ್ನೂ 2-3 ದಿನಗಳ ಅವಕಾಶವಿದೆ. ಜನರ ಮಧ್ಯ ಇರಬೇಕು. ಜನ ಸೇವೆ ಮಾಡಲು ಬಯಸಿದ್ದೇನೆ’ ಎಂದು ಹೇಳಿದರು.
ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾವು ಪರಸ್ಪರ ವಿರೋಧಿಸಿಕೊಂಡೇ ಬೆಳೆದವರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರ ವಿರೋಧ ಕೂಡ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.