ADVERTISEMENT

ಮಂಗಳೂರಿನಲ್ಲಿ ಸರ್ಕಾರವೇ ದ್ವೇಷ ಬಿತ್ತುತ್ತಿದೆ: ಸಿಪಿಎಂ ಆರೋಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 9:50 IST
Last Updated 24 ಡಿಸೆಂಬರ್ 2019, 9:50 IST
ಸಿಪಿಎಂ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿದರು –ಪ್ರಜಾವಾಣಿ ಚಿತ್ರ
ಸಿಪಿಎಂ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿದರು –ಪ್ರಜಾವಾಣಿ ಚಿತ್ರ   

ಮಂಗಳೂರು: ಸರ್ಕಾರವೇ ಮಂಗಳೂರು ನಗರದಲ್ಲಿ ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ದ್ವೇಷ ಬಿತ್ತುತ್ತಿದೆ. ಅದರ ಭಾಗವಾಗಿಯೇ ಪೊಲೀಸ್ ಗೋಲಿಬಾರ್ ನಡೆಸಿ ಇಬ್ಬರನ್ನು ಕೊಲ್ಲಲಾಗಿದೆ ಎಂದು ಸಿಪಿಎಂ ಆರೋಪಿಸಿದೆ.

ಮೃತರ ಕುಟುಂಬಗಳು ಹಾಗೂ ಗಾಯಾಳುಗಳನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಕೇಂದ್ರೀಯ ಸಮಿತಿಯ ನಿಯೋಗದ ನಾಯಕತ್ವ ವಹಿಸಿದ್ದ, ಮಾಜಿ ಸಂಸದ ಪಿ.ಕರುಣಾಕರನ್, 'ಪೊಲೀಸರು ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನೆಗೆ ಅನುಮತಿ ನೀಡಿ, ಬಳಿಕ ವಾಪಸು ಪಡೆದು ಜನರನ್ನು ಗಲಭೆಗೆ ಪ್ರಚೋದಿಸಿದರು. ಆರಂಭದಲ್ಲಿ 100ಕ್ಕಿಂತ ಕಡಿಮೆ ಇದ್ದ ಜನರ ಗುಂಪಿನ‌ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ಅಹಿತಕರ ಘಟನೆ ನಡೆಯಲು ಕಾರಣರಾಗಿದ್ದಾರೆ. ಸ್ಥಳೀಯರ ಹೇಳಿಕೆ ಮತ್ತು ಘಟನಾ ಸ್ಥಳದ ದೃಶ್ಯಗಳು ಈ ಅಂಶವನ್ನು ಸಾಕ್ಷೀಕರಿಸುತ್ತವೆ' ಎಂದರು.

'ಕೇರಳದ ಜನರು ಗಲಭೆಗೆ ಕಾರಣ' ಎಂದು ಕರ್ನಾಟಕದ ರಾಜ್ಯ ಸರ್ಕಾರವೇ ಸುಳ್ಳು ಆರೋಪ ಮಾಡುತ್ತಿದೆ. ಇದು ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಪ್ರಯತ್ನ. ರಾಜ್ಯ ಸರ್ಕಾರವೇ ಇಂತಹ ಕೆಲಸ ಮಾಡುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಘಟನೆಯ ಕುರಿತು ವರದಿ ಮಾಡಲು ಬಂದ ಕೇರಳದ ಪತ್ರಕರ್ತರನ್ನು ಇಲ್ಲಿನ ಪೊಲೀಸರು ಸುಳ್ಳು ಆರೋಪ ಹೊರಿಸಿ ಇಡೀ ದಿನ ವಶದಲ್ಲಿ ಇರಿಸಿಕೊಂಡಿದ್ದರು. ಈ ನಡೆ ಖಂಡನೀಯ. ಪತ್ರಕರ್ತರ ಮೇಲಿನ ದೌರ್ಜನ್ಯದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗೋಲಿಬಾರ್‌ನಲ್ಲಿ ಸತ್ತವರು ಮತ್ತು ಗಾಯಗೊಂಡವರೆಲ್ಲ ಬಡ ಕುಟುಂಬದ ಜನರು. ಅಶ್ರಫ್ ಎಂಬ ಪಿಎಚ್ ಡಿ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಈ ಎಲ್ಲರಿಗೂ ಹೆಚ್ಚಿನ ನೆರವು ನೀಡಬೇಕು. ಘಟನೆಯ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಗೋಲಿಬಾರ್ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ತನಿಖೆ ಮುಗಿಯುವವರೆಗೂ ಅಮಾನತಿನಲ್ಲಿ ಇರಿಸಬೇಕು ಎಂದು ಒತ್ತಾಯಿಸಿದರು.

ಕೇರಳ ಮತ್ತು ಕರ್ನಾಟಕದ ನಡುವೆ ಸೌಹಾರ್ದಯುತ ಸಂಬಂಧವಿದೆ.‌ ಶಿಕ್ಷಣ, ಆರೋಗ್ಯ, ವ್ಯಾಪಾರಕ್ಕಾಗಿ ಸಾವಿರಾರು ಮಂದಿ ನಿತ್ಯವೂ ಎರಡೂ ರಾಜ್ಯಗಳ ನಡುವೆ ಓಡಾಡುತ್ತಾರೆ. ಈಗ ಸುಳ್ಳು ಆರೋಪದ ಮೂಲಕ ಎರಡೂ ರಾಜ್ಯದ ಜನರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಬಾರದು ಎಂದರು.

ರಾಜ್ಯಸಭಾ ಸದಸ್ಯ ಕೆ.ಕೆ.ರಾಜೇಶ್ ಮಾತನಾಡಿ, 'ಮಲಯಾಳ ಭಾಷಿಕರಾದ ಕೇರಳದ ಜನರ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ‌ ಕರ್ನಾಟಕದ ಗೃಹ ಸಚಿವರು ಸಂಪುಟ ಸೇರುವಾಗ ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿದ್ದಾರೆ. ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲು ಯತ್ನಿಸಿದವರು ಸಚಿವರಾಗಿ ಮುಂದುವರಿಯಬಾರದು' ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ನಡೆದಿರುವುದು ಪೊಲೀಸ್ ಪ್ರಾಯೋಜಿತ ಹಿಂಸಾಚಾರ. ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ವಿಫಲರಾದ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇಡೀ ಘಟನೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು ಎಂದರು.
ಸಮಾವೇಶಗೊಳ್ಳುವುದು, ಪ್ರತಿಭಟನೆ ನಡೆಸುವುದು, ವಿರೋಧ ವ್ಯಕ್ತಪಡಿಸಲು ಸಂವಿಧಾನವೇ ಹಕ್ಕುಗಳನ್ನು ನೀಡಿದೆ. ಆದರೆ, ಅವುಗಳನ್ನು ನಿರಾಕರಿಸುವ ಮೂಲಕ ಪೊಲೀಸರು ಹಿಂಸೆಗೆ ಪ್ರಚೋದಿಸಿದರು. ಪೊಲೀಸರೇ ಹಿಂಸಾಚಾರವನ್ನೂ ನಡೆಸಿದರು ಎಂದು ದೂರಿದರು.

ರಾಜ್ಯಸಭಾ ಸದಸ್ಯ ಎಲಮಾರ ಕರೀಂ, ಶಾಸಕರಾದ ಎಂ.ರಾಜಗೋಪಾಲನ್, ಕೆ.ಕುಂಞಿರಾಮನ್, ಮಾಜಿ ಶಾಸಕ ಸಿ.ಎಚ್.ಕುಂಞಂಬು, ಕೇರಳ ಸಿಪಿಎಂ ಮುಖಂಡ ಜಯಾನಂದ, ಸಿಐಟಿಯು ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಸಿಪಿಎಂ ರಾಜ್ಯ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ನಿಯೋಗದಲ್ಲಿದ್ದರು.

ಘಟನಾ ಸ್ಥಳದಲ್ಲಿ ಸಿಪಿಎಂ ನಾಯಕರು ಸ್ಥಳೀಯರಿಂದ ಮಾಹಿತಿ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT