ADVERTISEMENT

ಕೋಮುವಾದ ಆದರ್ಶವಾಗಿಸಲು ಬಿಜೆಪಿ–ಆರ್‌ಎಸ್‌ಎಸ್‌ನಿಂದ ಪ್ರಯತ್ನ: ಪಿಣರಾಯಿ ವಾಗ್ದಾಳಿ

ಬಾಗೇಪಲ್ಲಿಯಲ್ಲಿ ಸಿಪಿಎಂ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 4:27 IST
Last Updated 19 ಸೆಪ್ಟೆಂಬರ್ 2022, 4:27 IST
ಬಾಗೇಪಲ್ಲಿಯಲ್ಲಿ ಭಾನುವಾರ ನಡೆದ ಸಿಪಿಎಂ ರಾಜಕೀಯ ಸಮಾವೇಶದಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು
ಬಾಗೇಪಲ್ಲಿಯಲ್ಲಿ ಭಾನುವಾರ ನಡೆದ ಸಿಪಿಎಂ ರಾಜಕೀಯ ಸಮಾವೇಶದಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು   

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಎತ್ತ ನೋಡಿದರೂ ಕೆಂಬಾವುಟಗಳು. ಒಂದು ಕಿಲೋ ಮೀಟರ್‌ ಉದ್ದಕ್ಕೂ ಕಿಕ್ಕಿರಿದು ಸೇರಿದ್ದ ಕಾರ್ಯಕರ್ತರ ರ‍್ಯಾಲಿ. ಮೊಳಗಿದ ತಮಟೆಯ ಸದ್ದು, ಕ್ರಾಂತಿ ಗೀತೆಗಳು, ಪಕ್ಷದ ಪರ ಘೋಷಣೆಗಳು. ಎಲ್ಲಿ ನೋಡಿದರೂ ಕೆಂಪುವಸ್ತ್ರಧಾರಿಗಳು..

ಇದು ಪಟ್ಟಣದಲ್ಲಿ ಭಾನುವಾರ ನಡೆದ ಸಿಪಿಎಂ ರಾಜಕೀಯ ಸಮಾವೇಶದ ಚಿತ್ರಣ. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಸಿಪಿಎಂ ಕಾರ್ಯಕರ್ತರು ಮತ್ತು ಮುಖಂಡರು ಸಮಾವೇಶಕ್ಕೆ ಸಾಕ್ಷಿಯಾದರು. ಸಮಾವೇಶದ ಮುಖ್ಯಭಾಷಣಕಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯದ್ವಾರದಿಂದ ವೇದಿಕೆಗೆ ಬರುವಾಗ ಕಾರ್ಯಕರ್ತರು ಎದ್ದು ನಿಂತು ಮೊಳಗಿಸಿದ ‘ಲಾಲ್ ಸಲಾಂ’, ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಗಳು ಸಭಾಂಗಣದಲ್ಲಿ ಮಾರ್ದನಿಸಿದವು. ಒಂದೂಕಾಲು ಗಂಟೆ ಭಾಷಣದಲ್ಲಿ ಪಿಣರಾಯಿ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕ ಕೋಮುವಾದದ ಪ್ರಯೋಗ ಶಾಲೆ: ‘ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೋಮುವಾದವನ್ನು ಭಾರತದ ಅಧಿಕೃತ ಆದರ್ಶವನ್ನಾಗಿಸಲು ಯತ್ನಿಸುತ್ತಿವೆ. ಕೋಮುವಾದಿ ವಿ.ಡಿ.ಸಾವರ್ಕರ್ ವಿಚಾರಗಳನ್ನು ದೇಶದಾದ್ಯಂತ ಪಸರಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪಿಣರಾಯಿ ದೂರಿದರು.

ADVERTISEMENT

‘ಸಮಾನತೆ, ಜಾತ್ಯತೀತತೆ, ಪ್ರಗತಿಪರ ಚಳವಳಿಗಳಿಗೆ ಕರ್ನಾಟಕದಲ್ಲಿ ದೊಡ್ಡ ಪರಂಪರೆ ಇದೆ. ಅಂತಹ ಪರಂಪರೆಯನ್ನು ಅಳಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿವೆ. ಉತ್ತರ ಭಾರತದ ರಾಜ್ಯಗಳ ರೀತಿ ಕರ್ನಾಟಕವನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಸಾಹಿತಿ ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರು ಯಾರ ವಿರುದ್ಧ ಹೋರಾಡಿ ಮೃತಪಟ್ಟರು ಎನ್ನುವುದನ್ನು ಮರೆಯಬಾರದು. ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಹಿಂದೆ ಸಂಘ ಪರಿವಾರವಿದೆ. ಚಿಂತಕ ಕೆ.ಎಸ್.ಭಗವಾನ್ ಅವರು ನಿರಂತರವಾಗಿ ಸಂಘ ಪರಿವಾರದ ಬೆದರಿಕೆ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

ಅಲ್ಪಸಂಖ್ಯಾತರನ್ನು ಭಾರತದಲ್ಲಿ ಎರಡನೇ ದರ್ಜೆಯ ಪ್ರಜೆಗಳು ಎನ್ನುವ ರೀತಿ ಬಿಂಬಿಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಬಹುಸಂಖ್ಯಾತರ ಕೋಮುವಾದವನ್ನು ಅಲ್ಪಸಂಖ್ಯಾತರ ಕೋಮುವಾದದ ಮೂಲಕ ಮಣಿಸಲು ಸಾಧ್ಯವಿಲ್ಲ. ಕೋಮುವಾದಿ ಶಕ್ತಿಗಳನ್ನು ಕೋಮುವಾದದ ಮೂಲಕವೇ ಎದುರಿಸಲು ಮುಂದಾದರೆ ಮತ್ತಷ್ಟು ವಿಭಜನೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಎಸ್‌ಡಿಪಿಐ, ಪಿಎಫ್‌ಐ, ಜಮಾತೆ ಇಸ್ಲಾಂ ಸಂಘಟನೆಗಳ ಚಟುವಟಿಕೆಗಳು ಆರ್‌ಎಸ್‌ಎಸ್‌ನ ಕೋಮುವಾದದ ಬೆಂಕಿಗೆ ಮದ್ಯವನ್ನು ಸುರಿಯುವಂತೆ ಆಗುತ್ತಿದೆ.ಅಲ್ಪಸಂಖ್ಯಾತರ ಹಿತ ಕಾಪಾಡಬೇಕಾದರೆ ಎಡಪಕ್ಷಗಳನ್ನು ಬೆಳೆಸಬೇಕು ಎಂದು ಅವರು ಹೇಳಿದರು.

‘ಪ್ರಮಾಣಪತ್ರ; ಅಧಿಕಾರ ನೀಡಿದವರು ಯಾರು’
ರಾಷ್ಟ್ರೀಯತೆ ಎಂದರೆ ಹಿಂದುತ್ವ ಎನ್ನುವ ರೀತಿಯಲ್ಲಿ ಆರ್‌ಎಸ್‌ಎಸ್ ಪ್ರಚಾರ ಮಾಡುತ್ತಿದೆ. ಹಿಂದೂಗಳಲ್ಲದವರ ರಾಷ್ಟ್ರಪ್ರೇಮವನ್ನು ಸಂಶಯದಿಂದ ನೋಡಲಾಗುತ್ತಿದೆ ಎಂದು ಪಿಣರಾಯಿ ಆತಂಕ ವ್ಯಕ್ತಪಡಿಸಿದರು.

‘ರಾಷ್ಟ್ರೀಯತೆಯ ಪ್ರಮಾಣ ಪತ್ರ ನೀಡುವ ಅಧಿಕಾರವು ಕೆಲವರಿಗೆ ಮಾತ್ರ ಸೀಮಿತವಾಗಿದೆ. ರಾಷ್ಟ್ರೀಯತೆಯ ಪ್ರಮಾಣ ಪತ್ರ ನೀಡಲು ಇವರಿಗೆ ಅಧಿಕಾರ ನೀಡಿದವರು ಯಾರು’ ಎಂದು ಪ್ರಶ್ನಿಸಿದರು.

**

ಸೈದ್ಧಾಂತಿಕವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಡುವ ಶಕ್ತಿಯನ್ನು ಕಾಂಗ್ರೆಸ್ ಕಳೆದುಕೊಂಡಿದೆ.
-ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.