ಬೆಂಗಳೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ.
‘ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ಹಾಗೂ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಸಚಿವ ಚಲುವರಾಯಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಸಿದ್ದಾರ್ಥ್ ಬಿ.ಮುಚ್ಚಂಡಿ, ‘ಕಳೆದ ನೂರು ವರ್ಷಗಳ ದಾಖಲೆಗಳಲ್ಲಿ ಎಲ್ಲೂ ವ್ಯಾಜ್ಯಗ್ರಸ್ತ ಜಮೀನನ್ನು ಖರಾಬು ಅಥವಾ ಕೆರೆ ಪ್ರದೇಶ ಎಂದು ಉಲ್ಲೇಖ ಮಾಡಿಲ್ಲ. ಇದೀಗ ಏಕಾಏಕಿ ಸರ್ವೆ ನಡೆಸಿ ಅದನ್ನು ಕೆರೆ ಜಾಗ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ’ ಎಂದರು.
‘ಮಂಜೂರಾದ ಜಮೀನನ್ನು ಸರ್ಕಾರ ರದ್ದುಗೊಳಿಸಿಲ್ಲ. ಮಂಜೂರಾತಿ ಹಾಗೆಯೇ ಇದೆ. ಆದ್ದರಿಂದ, ಇಲ್ಲಿ ಒತ್ತುವರಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಪ್ರಕರಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ–2011 ಅನ್ನು ಅನ್ವಯಿಸಿರುವುದೇ ಕಾನೂನು ಬಾಹಿರ ಕ್ರಮ. ಆದ್ದರಿಂದ, ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ರದ್ದುಗೊಳಿಸಬೇಕು’ ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ಭೂ ಕಬಳಿಕೆ ಕುರಿತಂತೆ ವಿಶೇಷ ಕೋರ್ಟ್ 2024ರ ಮಾರ್ಚ್ 28ರಂದು ಹೊರಡಿಸಿದ್ದ ಸಮನ್ಸ್ ಹಾಗೂ ಮುಂದಿನ ವಿಚಾರಣಾ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿತು. ವಿಚಾರಣೆಯನ್ನು 2025ರ ಜನವರಿಗೆ ಮುಂದೂಡಲಾಗಿದೆ.
ಪ್ರಕರಣವೇನು?: ದಾಸನಪುರ ಹೋಬಳಿಯ ಮಾಕಳಿ ಗ್ರಾಮದ ಸರ್ವೆ ನಂಬರ್ 13ರಲ್ಲಿದ್ದ 3 ಎಕರೆ 13 ಗುಂಟೆ ಜಮೀನನ್ನು ಮೂಲ ಮಾಲೀಕ ಗೌಡಯ್ಯ ಅವರು 1923ರಲ್ಲಿ ಆಂಜನೇಯ ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದರು. 1982ರಲ್ಲಿ ದೇವಾಲಯದ ಹೆಸರಿನಲ್ಲಿ ಈ ಜಾಗವನ್ನು ನೋಂದಣಿ ಮಾಡಿಕೊಡುವಂತೆ ಭೂ ನ್ಯಾಯಮಂಡಳಿ ಆದೇಶಿಸಿತ್ತು.
ತದನಂತರ 2023ರ ಸೆಪ್ಟೆಂಬರ್ 23ರಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಈ ಬಗ್ಗೆ ದೂರು ದಾಖಲಿಸಿಕೊಂಡಿತ್ತು. ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರ್‌ಗೆ ನಿರ್ದೇಶಿಸಿತ್ತು. ಸರ್ವೇ ನಡೆಸಿದ್ದ ತಹಶೀಲ್ದಾರ್, ‘ಸುಮಾರು 9 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ವಿಶೇಷ ನ್ಯಾಯಾಲಯ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.