ADVERTISEMENT

‘ಸೀಟ್‌ ಬ್ಲಾಕಿಂಗ್‌’ ವಿರುದ್ಧ ಕ್ರಿಮಿನಲ್‌ ಪ್ರಕರಣ: ಸಚಿವ ಡಾ.ಎಂ.ಸಿ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 23:46 IST
Last Updated 8 ನವೆಂಬರ್ 2024, 23:46 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಳ ‘ಸೀಟ್‌ ಬ್ಲಾಕಿಂಗ್‌’ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಶುಕ್ರವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಐ.ಪಿ ವಿಳಾಸದಿಂದ 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಸೀಟುಗಳನ್ನು ನಮೂದಿಸಿದವರ ವಿವರ ಸಂಗ್ರಹಿಸಲು ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆಗೆ (ಸಿಇಎನ್‌) ದೂರು ನೀಡಲಾಗುವುದು. ಖಚಿತ ಮಾಹಿತಿ ದೊರೆತ ನಂತರ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗುವುದು ಎಂದರು.

ಸೀಟು ಹಂಚಿಕೆಯಾಗಿದ್ದರೂ, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪಡೆಯದ 2,348 ವಿದ್ಯಾರ್ಥಿಗಳಿಗೆ ಕೆಇಎ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ವಿದ್ಯಾರ್ಥಿಗಳು ನೀಡಿದ ಉತ್ತರದ ಮೂಲಕ ಬಹು ನೋಂದಣಿಯಾಗಿದ್ದ ಐ.ಪಿ ವಿಳಾಸಗಳನ್ನು ಗುರುತಿಸಲಾಗಿತ್ತು. ಸುಮಾರು 50 ಐ.ಪಿ ವಿಳಾಸದಿಂದ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಬಹು ಬೇಡಿಕೆ ಇರುವ ಕೋರ್ಸ್‌ಗಳ ಸೀಟು ಪಡೆದಿರುವುದು ದೃಢಪಟ್ಟಿದೆ ಎಂದು ಸುಧಾಕರ್‌ ವಿವರಿಸಿದರು.

ADVERTISEMENT

ನೋಟಿಸ್‌ ನೀಡಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ತನಿಖೆಗೆ ಒಳಪಡಿಸುವುದಿಲ್ಲ. ಒಂದೇ ಐ.ಪಿ ವಿಳಾಸದಿಂದ ಸೀಟು ಪಡೆದ ವಿದ್ಯಾರ್ಥಿಗಳನ್ನಷ್ಟೇ ವಿಚಾರಣೆ ನಡೆಸಲು ಸಿಇಎನ್‌ ಪೊಲೀಸರಿಗೆ ಸೂಚಿಸಲಾಗುವುದು. ದಾಖಲೆಗಳು ದೊರೆತ ನಂತರ ಕಾಲೇಜುಗಳಿಗೆ ನೋಟಿಸ್‌ ನೀಡಿ ವಿವರಣೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಮುಖ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬೇಡಿಕೆ ಇರುವ ಕೋರ್ಸ್‌ಗಳೇ ಖಾಲಿ ಉಳಿದಿವೆ. ಅಂತಹ ಕಾಲೇಜುಗಳನ್ನು ಪಟ್ಟಿ ಮಾಡಲಾಗಿದೆ. ಸೀಟ್‌ ಬ್ಲಾಕಿಂಗ್‌ ದಂಧೆಯ ಹಿಂದೆ ದೊಡ್ಡ ಜಾಲ ಇರುವ ಶಂಕೆ ಇದೆ. ಪ್ರತಿಭಾವಂತರಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ವಂಚಿಸುವ ಇಂತಹ ಜಾಲದ ನಿರ್ಮೂಲನೆಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

ಕಾಲೇಜುಗಳು;ಉಳಿದ ಸೀಟುಗಳು
ಬಿಎಂಎಸ್;92 ಆಕಾಶ್‌;82 ನ್ಯೂ ಹಾರಿಜಾನ್‌;52  ವಿವೇಕಾನಂದ;45 ದಯಾನಂದ್‌ ಸಾಗರ್‌;34  ಸರ್‌.ಎಂವಿ;32 ಎಂವಿಜೆ;31 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.