ಬೆಂಗಳೂರು: ‘ಕ್ರಿಮಿನಲ್ ಪ್ರಕರಣಗಳಲ್ಲಿ ಬಹಳಷ್ಟು ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೆ ಘಟನಾ ಸ್ಥಳದ ಪಂಚನಾಮೆ ಮಾಡಿದ ನಾಲ್ಕು ಸಾಲು ಮಹಜರು ವರದಿ ಬರೆಯುವುದಕ್ಕೆ ಬರುವುದಿಲ್ಲ’ ಎಂದು ಹೈಕೋರ್ಟ್ ಪೊಲೀಸರ ಕಾನೂನು ಜ್ಞಾನ ಮತ್ತು ಕಾರ್ಯ ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಪೊಲೀಸ್ ತನಿಖಾ ವರದಿಯ ಲೋಪಗಳ ಬಗ್ಗೆ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ‘ಕ್ರಿಮಿನಲ್ ಪ್ರಕರಣಗಳಲ್ಲಿ ಯಾವುದೇ ತನಿಖಾಧಿಕಾರಿಯು ಶವಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗುವುದಿಲ್ಲ. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ಪಾಲಿಸುತ್ತಿಲ್ಲ. ಕಾನೂನುಗಳ ಬಗ್ಗೆ ಆಳವಾದ ಮಾಹಿತಿ ಇಲ್ಲದ ಕಾನ್‌ಸ್ಟೆಬಲ್‌ಗಳು ತನಿಖೆ ನಡೆಸಿ ವರದಿ ಸಿದ್ಧಪಡಿಸಿದರೆ, ಅದಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳು ಸಹಿ ಮಾಡಿ ಕೋರ್ಟ್‌ಗೆ ಸಲ್ಲಿಸಿಬಿಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಪೊಲೀಸರ ನಿತ್ಯದ ಕೆಲಸದಲ್ಲಿ ಇಂತಹ ಏರುಪೇರಾಗಲು ಹಾಗೂ ಇಂತಹ ಪರಿಸ್ಥಿತಿಗೆ ಮತ್ತೂ ಒಂದು ಕಾರಣವಿದ್ದು, ಪ್ರತಿದಿನ ವಿಐಪಿಯೊಬ್ಬರು ನಗರಕ್ಕೆ ಬರುತ್ತಾರೆ. ಅವರ ಸುಗಮ ಸಂಚಾರ ವ್ಯವಸ್ಥೆ ಹಾಗೂ ಬಂದೋಬಸ್ತ್‌ಗೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಇನ್ನು ಯಾವಾಗ ತನಿಖೆ ನಡೆಸುತ್ತಾರೆ’ ಎಂದು ಸದ್ಯದ ಪರಿಸ್ಥಿತಿಯನ್ನೂ ನ್ಯಾಯಮೂರ್ತಿಗಳು ವಿವರಿಸಿದ್ದಾರೆ.
‘ಸರ್ಕಾರಿ ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನು ಅರಿವು ಮೂಡಿಸಬೇಕು. ನ್ಯಾಯಾಲಯದ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.