ADVERTISEMENT

ಮಳೆ ಹಾನಿ | ಕೇಂದ್ರದ ಪರಿಹಾರ ಸದ್ಯ ಅಗತ್ಯವಿಲ್ಲ: ಕಂದಾಯ ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 19:48 IST
Last Updated 2 ಜುಲೈ 2024, 19:48 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಮೈಸೂರು: ‘ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಇದುವರೆಗೂ 20 ಮಂದಿ ಮೃತಪಟ್ಟಿದ್ದಾರೆ. ಮಳೆ ಹಾನಿಗೆ ಪರಿಹಾರ ಕೊಡುವಷ್ಟು ಹಣ ನಮ್ಮಲ್ಲಿದ್ದು, ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ‌. ಮಳೆ ಹೆಚ್ಚಾಗಿ, ನಷ್ಟವಾದರೆ ಪರಿಹಾರ ಕೇಳುತ್ತೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. 

ನಗರದಲ್ಲಿ ಮಂಗಳವಾರ ಕಂದಾಯ ಇಲಾಖೆ ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ‘ಅತಿವೃಷ್ಟಿಯಾಗುವ 1,763 ಸಂಭವನೀಯ ಗ್ರಾಮಗಳನ್ನು ಗುರುತಿಸಲಾಗಿದ್ದು, ಆಯಾ ಜಿಲ್ಲಾಡಳಿತಕ್ಕೆ ಪಟ್ಟಿ ನೀಡಲಾಗಿದೆ. ವಿಪತ್ತು ನಿರ್ವಹಿಸಲು ಟಾಸ್ಕ್‌ಫೋರ್ಸ್ ರಚನೆಗೆ ಸೂಚಿಸಲಾಗಿದೆ’ ಎಂದರು.

‘ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು, ಎಂಜಿನಿಯರುಗಳು, ಅಗ್ನಿಶಾಮಕ ದಳ, ಪೊಲೀಸ್‌ ಹಾಗೂ ಸಣ್ಣ ನೀರಾವರಿ ಇಲಾಖೆ ಸಿಬ್ಬಂದಿ ಟಾಸ್ಕ್‌ಫೋರ್ಸ್‌ನಲ್ಲಿರಲಿದ್ದಾರೆ. ಸಂಭವನೀಯ ಅತಿವೃಷ್ಟಿ ಗ್ರಾಮಗಳಿಗೆ ಭೇಟಿ ನೀಡಿ ಅಣಕು ಕಾರ್ಯಾಚರಣೆ ಮಾಡಲಿದ್ದಾರೆ’ ಎಂದರು.

ADVERTISEMENT

₹ 777 ಕೋಟಿ ಬಿಡುಗಡೆ: ‘ವಿಪತ್ತು ನಿರ್ವಹಣೆಗಾಗಿ ₹ 777 ಕೋಟಿ ಹಣವನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಖಾತೆಗಳಿಗೆ ವಿತರಿಸಲಾಗಿದೆ. ಎರಡ್ಮೂರು ದಿನ ಸತತ ಮಳೆಯಾಗುವ ಮುನ್ಸೂಚನೆ ಬಂದಾಗ ಗ್ರಾಮದಲ್ಲಿಯೇ ತಂಡವು ಮೊಕ್ಕಾಂ ಹೂಡಲು ಹಾಗೂ ಅವಶ್ಯಕತೆ ಇದ್ದರೆ ಕಾಳಜಿ ಕೇಂದ್ರ ತೆರೆಯಲು ಸೂಚಿಸಲಾಗಿದೆ’ ಎಂದು ಹೇಳಿದರು.

‘ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಬೆಂಗಳೂರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತುಕಡಿ ಹಾಗೂ ಬೆಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಎಸ್‌ಟಿಆರ್‌ಎಫ್‌ ತುಕಡಿಗಳನ್ನು ಇರಿಸಲಾಗಿದೆ. ಜವಾಬ್ದಾರಿಯುತ ಸರ್ಕಾರವಾಗಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ’ ಎಂದರು. 

ಜುಲೈ ಅಂತ್ಯಕ್ಕೆ ಸರ್ವೆ ಪೂರ್ಣ: ‘ರಾಜ್ಯದಲ್ಲಿ ಸರ್ಕಾರಿ ಜಾಗಗಳ ರಕ್ಷಿಸಲು ಸರ್ವೆ ಆರಂಭಿಸಲಾಗಿದ್ದು, ಒಟ್ಟು 14 ಲಕ್ಷ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಒತ್ತುವರಿ ಎಷ್ಟಾಗಿದೆಯೆಂಬ ಸರ್ವೆ ಶುರುವಾಗಿದೆ. ಇದೇ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಒತ್ತುವರಿ ತೆರವು ನಂತರ ನಡೆಸಲಾಗುವುದು’ ಎಂದರು.

‘ಮಠದಲ್ಲಿ ಹೇಳಬಹುದಿತ್ತು’

ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ಬಿಟ್ಟುಕೊಡಬೇಕೆಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಕೃಷ್ಣ ಬೈರೇಗೌಡ ಪ್ರತ್ರಿಕ್ರಿಯಿಸಿ ‘ಅದು ಸರಿಯೋ ತಪ್ಪೋ ಎಂದು ವ್ಯಾಖ್ಯಾನಿಸಲಾರೆ. ಆದರೆ ಸ್ವಾಮೀಜಿ ಮಠದಲ್ಲಿ ಹೇಳಿಕೆ ಕೊಡಬಹುದಿತ್ತು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸುವುದು ಉಚಿತವಲ್ಲ’ ಎಂದರು.

‘ಉಪಮುಖ್ಯಮಂತ್ರಿ ಹುದ್ದೆ ಬೇಕಿದ್ದರೆ ವರಿಷ್ಠರ ಬಳಿ ಮಾತನಾಡಬೇಕು. ಸಾರ್ವಜನಿಕವಾಗಿ ಅಲ್ಲ. ನಮ್ಮದೇ ಸಮಸ್ಯೆ ಹೇಳುತ್ತಾ ಕುಳಿತರೇ ಜನರ ಸಮಸ್ಯೆ ಬಗೆಹರಿಸುವುದು ಯಾರು’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.