ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷರ ಆಯ್ಕೆ ಸಮಿತಿಯ ಸದಸ್ಯರೂ ಆಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ತಾವೇ ಆ ಹುದ್ದೆ ಬಯಸಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಕೆಇಆರ್‌ಸಿ ಅಧ್ಯಕ್ಷರ ನೇಮಕಾತಿಗೆ ಜನವರಿಯಲ್ಲಿ ಆರಂಭವಾಗಿದ್ದ ಪ್ರಕ್ರಿಯೆ ಬಹುತೇಕ ಅಂತಿಮ ಘಟ್ಟ ತಲುಪಿದೆ. ತಾವೇ ಆಯ್ಕೆ ಸಮಿತಿಯ ಸದಸ್ಯರಾಗಿದ್ದುಕೊಂಡು, ಅದೇ ಹುದ್ದೆಗಾಗಿ ಅರ್ಜಿಯನ್ನೂ ಸಲ್ಲಿಸುವ ಮೂಲಕ ಮುಖ್ಯ ಕಾರ್ಯದರ್ಶಿ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದಾರೆ ಎಂಬ ಚರ್ಚೆ ಅಧಿಕಾರಿಗಳಲ್ಲಿ ನಡೆಯುತ್ತಿದೆ.
‘ಕೆಇಆರ್‌ಸಿ ಅಧ್ಯಕ್ಷ ಹುದ್ದೆಗೆ ಅರ್ಹ ವ್ಯಕ್ತಿಯನ್ನು ಆಯ್ಕೆಮಾಡಲು ನೇಮಿಸಿರುವ ಸಮಿತಿಯಲ್ಲಿ ರವಿಕುಮಾರ್ ಸದಸ್ಯರು. ಅವರೇ ಆ ಹುದ್ದೆಗೆ ನೇಮಕ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವುದು ಕಾನೂನು ಉಲ್ಲಂಘನೆ’ ಎಂದು ನಗರದ ವಕೀಲ ರವಿಕುಮಾರ್ ಎಂಬು
ವವರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಕೆಇಆರ್‌ಸಿ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಂಭು ದಯಾಳ್ ಮೀನಾ 2022ರ ಜನವರಿ 3ರಂದು ನಿವೃತ್ತರಾಗಿದ್ದರು. ಆಯೋಗದ ಅಧ್ಯಕ್ಷರ ಹುದ್ದೆಗೆ ಅರ್ಹ ವ್ಯಕ್ತಿಯನ್ನು ಆಯ್ಕೆಮಾಡಲು ಪ್ರಕ್ರಿಯೆ ಆರಂಭಿಸುವಂತೆ ಕೆಇಆರ್‌ಸಿ ಕಾರ್ಯದರ್ಶಿಯು ಇಂಧನ ಇಲಾಖೆಗೆ 2021ರ ಜುಲೈ 9ರಂದು ಪತ್ರ ಬರೆದಿದ್ದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ, ಪಿ. ರವಿಕುಮಾರ್ ಮತ್ತು ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ (ಸಿಇಆರ್‌ಸಿ) ಮುಖ್ಯ ಕಾರ್ಯದರ್ಶಿ ಪಿ.ಕೆ. ಪೂಜಾರಿ ಅವರನ್ನೊಳಗೊಂಡ ಸಮಿತಿಯನ್ನು ನೇಮಕ ಮಾಡಿ 2021ರ ಡಿಸೆಂಬರ್ 27ರಂದು ಆದೇಶ ಹೊರಡಿಸಲಾಗಿತ್ತು. ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಆಯ್ಕೆ ಸಮಿತಿಯ ಸಂಯೋಜಕರನ್ನಾಗಿ ನೇಮಿಸಲಾಗಿತ್ತು.
‘ಸಮಿತಿಯು ನೇಮಕಗೊಂಡ ಮೂರು ತಿಂಗಳ ಒಳಗಾಗಿ ಕೆಇಆರ್‌ಸಿ ಅಧ್ಯಕ್ಷರ ಹುದ್ದೆಗೆ ನೇಮಕಗೊಳ್ಳಲು ಅರ್ಹರಾದ ವ್ಯಕ್ತಿಗಳ ಹೆಸರುಗಳನ್ನು ಶಿಫಾರಸು ಮಾಡಬೇಕು. ವಿದ್ಯುತ್ ಕಾಯ್ದೆಯಲ್ಲಿ ನಿಗದಿಪಡಿಸಿರುವ ಅರ್ಹತೆಗಳು ಈ ವ್ಯಕ್ತಿಗಳಲ್ಲಿವೆ ಎಂಬುದು ಖಾತರಿಯಾದ ಬಳಿಕವೇ ಶಿಫಾರಸು ಸಲ್ಲಿಸಬೇಕು’ ಎಂದು ಆಯ್ಕೆ ಸಮಿತಿಗೆ ನಿರ್ದೇಶನ ನೀಡಲಾಗಿತ್ತು.
ಸಭೆಯಲ್ಲಿ ಭಾಗಿ: 2022ರ ಜನವರಿ 19ರಂದು ನಗರದ ಕೆ.ಆರ್. ವೃತ್ತದಲ್ಲಿರುವ ಬೆಸ್ಕಾಂ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಕೆಇಆರ್‌ಸಿ ಅಧ್ಯಕ್ಷರ ಆಯ್ಕೆ ಸಮಿತಿಯ ಸಭೆ ನಡೆದಿತ್ತು.
ಬಿ.ಎ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಆ ಸಭೆಯಲ್ಲಿ ರವಿಕುಮಾರ್ ಕೂಡ ಭಾಗಿಯಾಗಿದ್ದರು. ಆ ಸಭೆಯಲ್ಲೇ ಕೆಇಆರ್‌ಸಿ ಅಧ್ಯಕ್ಷರ ನೇಮಕಾತಿಗೆ ಅರ್ಜಿ ಆಹ್ವಾನಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಮತ್ತು ವೇಳಾಪಟ್ಟಿಗಳನ್ನು ಅನುಮೋದಿಸಲಾಗಿತ್ತು.
‘ಅರ್ಜಿ ಸಲ್ಲಿಸುವವರು ಕನಿಷ್ಠ 25 ವರ್ಷಗಳ ಸೇವಾ ಅನುಭವ ಹೊಂದಿರಬೇಕು ಮತ್ತು ಇಂಧನ ಇಲಾಖೆಯಲ್ಲಿ ಹಿರಿಯ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿರಬೇಕು’ ಎಂಬುದೂ ಸೇರಿದಂತೆ ಐದು ಅರ್ಹತೆಗಳನ್ನು ನಿಗದಿಪಡಿಸುವ ಕರಡನ್ನು ಆ ಸಭೆ ಅಂಗೀಕರಿಸಿತ್ತು. ಅದೇ ದಿನ ಅರ್ಜಿಗಳನ್ನೂ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿತ್ತು.
ಹಲವರ ಪೈಪೋಟಿ: ರವಿಕುಮಾರ್, ಮಹೇಂದ್ರ ಜೈನ್ ಸೇರಿದಂತೆ ಹಲವು ಅಧಿಕಾರಿಗಳು ಕೆಇಆರ್‌ಸಿ ಅಧ್ಯಕ್ಷರ ಹುದ್ದೆ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಆಯ್ಕೆ ಸಮಿತಿಯು ಇಬ್ಬರ ಹೆಸರನ್ನು ಶಿಫಾರಸು ಮಾಡಲು ಅವಕಾಶವಿದ್ದು, ಹಲವು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
1984ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ರವಿಕುಮಾರ್ 2021ರ ಜನವರಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೇ ಜೂನ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಅದಕ್ಕೂ ಮೊದಲು ಕೆಇಆರ್‌ಸಿ ಅಧ್ಯಕ್ಷರ ಹುದ್ದೆ ಭರ್ತಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ಸ್ವಯಂನಿವೃತ್ತಿ ಪಡೆಯಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.
‘ಕೆಇಆರ್‌ಸಿ ಅಧ್ಯಕ್ಷರ ಹುದ್ದೆ ಉನ್ನತ ಸ್ಥಾನಮಾನ ಮತ್ತು ವೇತನ, ಭತ್ಯೆಗಳನ್ನು ಹೊಂದಿದೆ. ಆಯೋಗದ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರಗಳೂ ಇವೆ. ಐದು ವರ್ಷಗಳ ಅಧಿಕಾರದ ಅವಧಿ ಇದ್ದು, 65 ವರ್ಷ ವಯಸ್ಸಾಗುವವರೆಗೂ ಸೇವೆಯಲ್ಲಿರಬಹುದು. ಈ ಎಲ್ಲ ಕಾರಣಕ್ಕಾಗಿ ಮುಖ್ಯ ಕಾರ್ಯದರ್ಶಿಯಂತಹ ಸಾಂವಿಧಾನಿಕ ಹುದ್ದೆ ತೊರೆದು, ಕೆಇಆರ್‌ಸಿ ಅಧ್ಯಕ್ಷ ಸ್ಥಾನಕ್ಕೇರಲು ಪ್ರಯತ್ನ ನಡೆಸಿದ್ದಾರೆ’ ಎಂಬ ಮಾತು ಅಧಿಕಾರಿಗಳ ವಲಯದಲ್ಲಿದೆ.
‘ಆಯ್ಕೆ ಸಮಿತಿಯಿಂದ ಹೊರ ಬಂದಿದ್ದೇನೆ’
‘ಕೆಇಆರ್‌ಸಿ ಅಧ್ಯಕ್ಷರ ನೇಮಕಾತಿಯ ಆಯ್ಕೆ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದುದು ನಿಜ. ಈಗ ಅದೇ ಹುದ್ದೆಗೆ ನೇಮಕಾತಿ ಬಯಸಿ ಅರ್ಜಿ ಸಲ್ಲಿಸಿರುವುದೂ ಸತ್ಯ. ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆ ಸಮಿತಿಯಿಂದ ನನ್ನನ್ನು ಕೈಬಿಡುವಂತೆ ಪತ್ರ ನೀಡಿದ್ದೇನೆ. ಮುಂದಿನ ಸಭೆಗಳಿಗೆ ಆಹ್ವಾನ ನೀಡದಂತೆಯೂ ಕೋರಿದ್ದೇನೆ. ಈಗ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಉದ್ಭವಿಸುವುದಿಲ್ಲ ’ ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಆದರೆ, ಕೆಇಆರ್‌ಸಿ ಅಧ್ಯಕ್ಷರ ಆಯ್ಕೆ ಸಮಿತಿಯ ಸದಸ್ಯರ ಸ್ಥಾನದಿಂದ ರವಿಕುಮಾರ್ ಅವರನ್ನು ಕೈಬಿಟ್ಟು ಇತರರನ್ನು ನೇಮಿಸುವ ಕುರಿತು ಈವರೆಗೂ ಯಾವುದೇ ಅಧಿಸೂಚನೆ ಪ್ರಕಟವಾಗಿಲ್ಲ.
ಬೊಕ್ಕಸಕ್ಕೆ ನಷ್ಟ ಮಾಡಿರುವ ಆರೋಪ
‘ರವಿಕುಮಾರ್ ಅವರು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಾಗಾರ್ಜುನ ಮತ್ತು ಅದಾನಿ ಕಂಪನಿಗಳಿಂದ ವಿದ್ಯುತ್ ಖರೀದಿಯಲ್ಲಿ ಹೆಚ್ಚಿನ ದರ ನಿಗದಿ ಮಾಡುವ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಈ ವಿಚಾರವನ್ನೂ ಕೆಇಆರ್‌ಸಿ ಅಧ್ಯಕ್ಷರ ನೇಮಕದ ಮುನ್ನ ಪರಿಶೀಲಿಸಬೇಕು’ ಎಂದು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.