ಬೆಂಗಳೂರು: ‘ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವಾಗ, ಅಂಗವಿಕಲ ನೌಕರರಿಗೆ ಮೀಸಲಾತಿ ನೀಡಲು ತುರ್ತಾಗಿ ಕ್ರಮಕೈಗೊಳ್ಳಲಾಗುವುದು’ ಎಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ನಿಯೋಗಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭರವಸೆ ನೀಡಿದರು.
ಸಂಘದ ಗೌರವಾಧ್ಯಕ್ಷ ರೇಣುಕಾರಾಧ್ಯ, ರಾಜ್ಯ ಘಟಕದ ಅಧ್ಯಕ್ಷ ಆರ್. ಇಂದ್ರೇಶ್, ಕಾರ್ಯದರ್ಶಿಗಳಾದ ಸದಾನಂದ ಆಚಾರ್ಯ ಮತ್ತು ರಾಮಣ್ಣ ನೇತೃತ್ವದ ನಿಯೋಗವು ಮುಖ್ಯ ಕಾರ್ಯದರ್ಶಿ ಅವರನ್ನು ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
‘ಸುಪ್ರೀಂ ಕೋರ್ಟ್ ಆದೇಶದಂತೆ ಅಂಗವಿಕಲ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲು ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಭರವಸೆ ನೀಡಿದ ಮುಖ್ಯ ಕಾರ್ಯದರ್ಶಿ, ‘ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಅಂಗವಿಕಲ ಸ್ನೇಹಿ ಶೌಚಗೃಹಗಳನ್ನು ನಿರ್ಮಿಸಿರುವ ಮತ್ತು ಅಂಗವಿಕಲ ವ್ಯಕ್ತಿ ಸ್ನೇಹಿ ವಾತಾವರಣ ಕಲ್ಪಿಸಿದ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯಕಾರಿ ವಿಭಾಗಕ್ಕೆ ಸೂಚಿಸಿದರು.
ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ‘7ನೇ ವೇತನ ಆಯೋಗದ ಶಿಫಾರಸಿನಂತೆ, ಅಂಗವಿಕಲರಿಗೆ ಶೇ 6ರಷ್ಟು ಪ್ರಯಾಣ ಭತ್ಯೆ ನೀಡಲು ಹಾಗೂ ಇತರ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಶೀಘ್ರವೇ ಆದೇಶ ಹೊರಡಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.