ಹುಬ್ಬಳ್ಳಿ: ಸಚಿವ ಚನ್ನಬಸಪ್ಪ.ಎಸ್.ಶಿವಳ್ಳಿ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಯರಗುಪ್ಪಿಯವರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದ ರಾಜಕಾರಣಿ. ಅವರಂತೆಯೇ ವಾಗ್ಮಿ, ಚತುರ ರಾಜಕಾರಣಿ. ಕ್ಷೇತ್ರದ ಜನರು ಅವರನ್ನು ‘ಬಡವರ ಬಂಧು’ ಎಂದು ಕರೆಯುವಷ್ಟು ಜನಾನುರಾಗಿ.
ಇದಕ್ಕೆ ಸಾಕ್ಷಿ ಎಂಬಂತೆ, ಶುಕ್ರವಾರ ಅವರ ಹಠಾತ್ ನಿಧನ ಸುದ್ದಿ ತಿಳಿದ ಕುಂದಗೋಳ, ಹುಬ್ಬಳ್ಳಿ ತಾಲ್ಲೂಕು ವ್ಯಾಪ್ತಿಯ ಸಾವಿರಾರು ಬಡವರು, ಕೂಲಿಕಾರ್ಮಿಕರು ಆಸ್ಪತ್ರೆ ಮತ್ತು ಅವರ ಮನೆಯ ಎದುರು ನೆರೆದು, ಬಾಯಿಬಡಿದುಕೊಂಡು ಕಣ್ಣೀರು ಸುರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಶಿವಳ್ಳಿ ಅವರು ಮೂಲತಃ ರಾಜಕೀಯ ಮನೆತನದವರಲ್ಲ. ಆದರೆ, ತಮ್ಮ ನೆಚ್ಚಿನ ನಾಯಕ ಬಂಗಾರಪ್ಪ ಅವರ ಸಲಹೆ ಮೇರೆಗೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಿವಳ್ಳಿ, ಪ್ರಥಮ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.
ಯರಗುಪ್ಪಿ ಗ್ರಾಮದ ರೈತ ಸತ್ಯಪ್ಪ ಹುಚ್ಚಪ್ಪ ಶಿವಳ್ಳಿ ಅವರ ಹಿರಿಯ ಮಗ ಚನ್ನಬಸಪ್ಪ. ರಾಜಕೀಯಕ್ಕೆ ಬರುವ ಮುನ್ನ ಕುಂದಗೋಳದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಕಟ್ಟಿ, ಅದರ ಅಧ್ಯಕ್ಷರಾಗಿದ್ದರು. ತಾಲ್ಲೂಕಿನಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡರು. ಪ್ರತಿ ವರ್ಷ ಬಸವ ಜಯಂತಿಯಂದು ಸಾಮೂಹಿಕ ವಿವಾಹ ಆಯೋಜಿಸುತ್ತಾ ಬರುತ್ತಿದ್ದರು.
ಬಂಗಾರಪ್ಪನವರಿಗೆ ಬಹಳ ಹತ್ತಿರದವರಾಗಿದ್ದ ಶಿವಳ್ಳಿ, ಕರ್ನಾಟಕ ಕಾಂಗ್ರೆಸ್ ಪಕ್ಷದ (ಕೆಸಿಪಿ) ಅಭ್ಯರ್ಥಿಯಾಗಿ 1994ರಲ್ಲಿ ಮೊದಲ ಬಾರಿಗೆ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ತಮ್ಮದೇ ಊರಿನ ಜನತಾ ದಳದ ಅಭ್ಯರ್ಥಿ ಎಂ.ಎಸ್. ಅಕ್ಕಿ ಎದುರು ಸೋಲುಂಡಿದ್ದರು.
1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯತ್ನಿಸಿದರೂ ಟಿಕೆಟ್ ಸಿಗಲಿಲ್ಲ. ಈ ಸಂದರ್ಭದಲ್ಲಿ ಬಂಗಾರಪ್ಪನವರ ಸಲಹೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ‘ಹಣ ಇಲ್ಲ, ನೀವೇ ನನಗೆ ನೋಟು, ವೋಟು ಭಿಕ್ಷೆ ಹಾಕಿ’ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು. ಕ್ಷೇತ್ರದ ಜನ ತಮ್ಮದೇ ದುಡ್ಡು ಖರ್ಚು ಮಾಡಿ ಪ್ರಚಾರ ಮಾಡಿದರು. ಅಂತೂ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
2004ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. 2008ರಲ್ಲಿ ಟಿಕೆಟ್ ಸಿಕ್ಕು ಸ್ಪರ್ಧಿಸಿ, ಸೋತರು. 2013ರಲ್ಲಿ ಮತ್ತೆ ಟಿಕೆಟ್ ಗಿಟ್ಟಿಸಿಕೊಂಡು ಗೆಲುವು ಸಾಧಿಸಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಜಯಗಳಿಸಿದ ಅವರಿಗೆ ಮೂರು ತಿಂಗಳ ಹಿಂದಷ್ಟೇ ಪೌರಾಡಳಿತ ಸಚಿವ ಸ್ಥಾನ ಒಲಿದು ಬಂದಿತ್ತು.
ನೆರವು ಕೇಳಿ ಬಂದವರಿಗೆ ವೈಯಕ್ತಿಕವಾಗಿ ಸಹಾಯ ಮಾಡುವುದರೊಂದಿಗೆ ಬಡವರಿಗೆ ಆಶ್ರಯ ಮನೆ, ಕುಡಿಯುವ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ನಿರ್ಮಾಣ, ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಿಸುವಲ್ಲಿ ಸತತವಾಗಿ ಶ್ರಮಿಸುವ ಮೂಲಕ ‘ಬಡವರ ಬಂಧು’ ಎಂದೇ ಹೆಸರಾಗಿದ್ದರು.
ಮಹದಾಯಿ ನದಿ ನೀರಿಗಾಗಿ ಕಣಕುಂಬಿ ಹಾಗೂ ದೆಹಲಿಯ ಜಂತರ್–ಮಂತರ್‌ಗೆ ಕ್ಷೇತ್ರದ ಜನರನ್ನು ಕರೆದೊಯ್ದು ಹೋರಾಟ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.