ADVERTISEMENT

ಬರ ಪರಿಹಾರ ನೀಡಲು ಹಣ ಇಲ್ಲ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿ: ಸಿ.ಟಿ ರವಿ

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಶಿಡ್ಲಘಟ್ಟದಲ್ಲಿ ಸಿಟಿ ರವಿ ಗುಡುಗು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2023, 11:18 IST
Last Updated 5 ನವೆಂಬರ್ 2023, 11:18 IST
ಸಿದ್ದರಾಮಯ್ಯ ಹಾಗೂ ಸಿ.ಟಿ. ರವಿ
ಸಿದ್ದರಾಮಯ್ಯ ಹಾಗೂ ಸಿ.ಟಿ. ರವಿ   

ಚಿಕ್ಕಬಳ್ಳಾಪುರ: ‘ಬರ ಪರಿಹಾರಕ್ಕೆ ನೀಡಲು ಹಣವಿಲ್ಲ. ನಮಗೆ ಯೋಗ್ಯತೆ ಇಲ್ಲ. ಪಾಪರ್ ಚೀಟಿ ತೆಗೆದುಕೊಂಡಿದ್ದೇವೆ’ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿ. ಆಗ ಅಯ್ಯೊ ಪಾಪ ಎನ್ನುತ್ತಾರೆ’–ಹೀಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಶಿಡ್ಲಘಟ್ಟದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಬರ ಪರಿಹಾರಕ್ಕೆ ₹ 17 ಸಾವಿರ ಕೋಟಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಕೋರಿದೆ. ಬಿಜೆಪಿಯವರು ಬರ ಅಧ್ಯಯನ ಪ್ರವಾಸಕ್ಕೆ ಹೊರಟ ನಂತರ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ₹ 324 ಕೋಟಿ ಬಿಡುಗಡೆ ಮಾಡಿದೆ. ₹ 324 ಕೋಟಿ ಅಂದರೆ ಒಂದು ತಾಲ್ಲೂಕಿಗೆ ಒಂದೂವರೆ ಕೋಟಿಯೂ ಬರುವುದಿಲ್ಲ. ಬರದ ಗಂಭೀರತೆಗೆ ಕನಿಷ್ಠ ನಾಲ್ಕೈದು ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡಬೇಕು ಅಲ್ಲವೇ. ನಿಮ್ಮ ಬೊಕ್ಕಸ ಖಾಲಿ ಆಗಿದೆ ಎಂದು ಒಪ್ಪಿಕೊಳ್ಳಿ ಎಂದರು.

ನಮ್ಮ ಖಜಾನೆ ಖಾಲಿ ಆಗಿದೆ ಎಂದು ಘೋಷಿಸಿ. ಖಜಾನೆ ಖಾಲಿಯಾದ ಕಾರಣ ಅನಿವಾರ್ಯವಾಗಿ ನೆರವು ಕೊಡಿ ಎಂದು ಕೇಂದ್ರವನ್ನು ಕೇಳೋಣ. ನಿಮ್ಮ ತಪ್ಪು ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದರು.

ADVERTISEMENT

2004 ರಿಂದ 2013ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಜ್ಯಕ್ಕೆ ₹ 2,976.27 ಕೋಟಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ನೀಡಿದ್ದಾರೆ. 2014ರಿಂದ 2023ರವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ₹ 12,788.7 ಕೋಟಿ ಎನ್‌ಡಿಆರ್‌ಎಫ್‌ ನಿಧಿ ನೀಡಿದೆ. ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆಯಾ? ಎಂದು ಪ್ರಶ್ನಿಸಿದರು.

ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚೆನ್ನಾಗಿ ಜಾನಪದ ನೃತ್ಯ ಮಾಡಿದರು. ನೃತ್ಯ ಮಾಡಿದ್ದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಇದು ನೃತ್ಯ ಮಾಡುವ ಸಮಯವಾ? ಮುಖ್ಯಮಂತ್ರಿ ಅವರು ನೃತ್ಯದಲ್ಲಿ ತಾಳ ತಪ್ಪಲಿಲ್ಲ. ಆದರೆ ನಿಮ್ಮ ಸರ್ಕಾರ ತಾಳತಪ್ಪಿದೆ. ಯಾವುದಕ್ಕೆ ಆದ್ಯತೆ ಕೊಡಬೇಕಾಗಿತ್ತೊ ಅದಕ್ಕೆ ಗಮನ ನೀಡುತ್ತಿಲ್ಲ ಎಂದು ದೂರಿದರು.

ನನ್ನೊಳಗೆ ಒಬ್ಬ ಒಳ್ಳೆಯ ಕಲಾವಿದ ಇದ್ದಾನೆ ಎನ್ನುವುದನ್ನು ನೃತ್ಯದ ಮೂಲಕ ಹೊರ ಜಗತ್ತಿಗೆ ತೋರಿಸಿದರು. ಆದರೆ ಮಾನವೀಯ ಸರ್ಕಾರ ಯಾವ ರೀತಿ ನಡೆದುಕೊಳ್ಳಬೇಕೊ ಆ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.