ADVERTISEMENT

ತುರ್ತುಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ದೇಶದ ಕ್ಷಮೆ ಕೇಳಲಿ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:14 IST
Last Updated 23 ಜೂನ್ 2024, 16:14 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ದೇಶಕ್ಕೆ ತುರ್ತುಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ ಪಕ್ಷವು ತಾನು ಮಾಡಿದ ತಪ್ಪಿಗೆ 49 ವರ್ಷಗಳಾದರೂ ಕ್ಷಮೆ ಕೇಳಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇಶಕ್ಕೆ ತುರ್ತುಪರಿಸ್ಥಿತಿ ಹೇರುವ ಇಂಥ ಪರಿಸ್ಥಿತಿ ಯಾವತ್ತೂ ಬರಬಾರದು. ಆ ಕರಾಳ ಅಧ್ಯಾಯದ ನೆನಪು ಮಾಡಿಕೊಳ್ಳುವ ಅವಶ್ಯಕತೆ ಇದೆ. ಕಾಂಗ್ರೆಸ್‌ಗೆ ತಾನು ಮಾಡಿದ್ದು ತಪ್ಪು ಎಂದು ಅನಿಸಿದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪಕ್ಷದ ಡಿಎನ್‌ಎಯಲ್ಲೇ ವ್ಯಕ್ತಿಗತ ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಮಾಡುವ ಮನಸ್ಥಿತಿ ಇದೆ. ಈ ಮನಸ್ಥಿತಿ ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ. ಕಾಂಗ್ರೆಸ್‌ ಪಕ್ಷ ಇಂದಿರಾಗಾಂಧಿಯವರ ನೇತೃತ್ವದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡಿತ್ತು. ಅದೊಂದು ಕರಾಳ ದಿನ ಎಂದು ರವಿ ಹೇಳಿದರು.

ADVERTISEMENT

‘ಆಗ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಜೊತೆಗಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ ಜತೆಗಿದ್ದರು. ಇಂದಿರಾಗಾಂಧಿ ಅವರು ಡಾ. ಅಂಬೇಡ್ಕರ್‌ ಕೊಟ್ಟ ಸಂವಿಧಾನವನ್ನು ದಮನ ಮಾಡಿದ್ದರು ಎಂಬುದು ಖರ್ಗೆಯವರಿಗೆ ಅರ್ಥವಾಗಬೇಕಿತ್ತು’ ಎಂದರು.

‘ತನ್ನ ಸ್ವಾರ್ಥಕ್ಕಾಗಿ, ಅಧಿಕಾರದಲ್ಲಿ ಉಳಿಯಬೇಕೆಂಬ ಏಕೈಕೆ ದುರುದ್ದೇಶದಿಂದ ಅಲಹಾಬಾದ್‌ ಕೋರ್ಟ್‌ ತೀರ್ಪಿನ ವಿರುದ್ಧ ಸಂವಿಧಾನವನ್ನೇ ಬುಡಮೇಲು ಮಾಡಿದ್ದರು. ವಿಪಕ್ಷ ನಾಯಕರನ್ನೆಲ್ಲ ಜೈಲಿಗೆ ಅಟ್ಟಿದ್ದಲ್ಲದೇ, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದ್ದರು. ಮೂಲಭೂತ ಹಕ್ಕುಗಳ ದಮನ ಮಾಡಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.