ADVERTISEMENT

ವಿಧಾನ ಪರಿಷತ್‌ ಕಲಾಪದಲ್ಲಿ ‘ಪೋಸ್ಟರ್ ವಾರ್’

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 15:34 IST
Last Updated 16 ಜುಲೈ 2024, 15:34 IST
ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ವಿಧಾನ ಪರಿಷತ್‌ನಲ್ಲಿ ಪರಸ್ಪರ ಪೋಸ್ಟರ್‌ಗಳನ್ನು ಪ್ರದರ್ಶಿಸಿ ವಾಗ್ವಾದ ನಡೆಸಿದರು  –ಪ್ರಜಾವಾಣಿ ಚಿತ್ರ
ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ವಿಧಾನ ಪರಿಷತ್‌ನಲ್ಲಿ ಪರಸ್ಪರ ಪೋಸ್ಟರ್‌ಗಳನ್ನು ಪ್ರದರ್ಶಿಸಿ ವಾಗ್ವಾದ ನಡೆಸಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಬಂಧಿತನಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಕಾಂಗ್ರೆಸ್ ನಾಯಕರ ಜೊತೆಗಿದ್ದ ಪೋಸ್ಟರ್‌ ಅನ್ನು ಬಿಜೆಪಿಯ ಸಿ.ಟಿ. ರವಿ ಪ್ರದರ್ಶಿಸುತ್ತಿದ್ದಂತೆ ಕೆರಳಿದ ಆಡಳಿತ ಪಕ್ಷ ಕಾಂಗ್ರೆಸ್‌ನ ಸದಸ್ಯರು, ಆತ ಬಿಜೆಪಿ ಕಾರ್ಯಕರ್ತನೆಂದು ಬಿ. ಶ್ರೀರಾಮುಲು ಜೊತೆಗಿರುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಇದರಿಂದ ವಿಧಾನ ಪರಿಷತ್‌ನಲ್ಲಿ ಭಾರಿ ಕೋಲಾಹಲವೇ ಸೃಷ್ಟಿಯಾಯಿತು.

ಮಂಗಳವಾರ ಮಧ್ಯಾಹ್ನ ನಂತರ ಕಲಾಪ ಆರಂಭವಾಗುತ್ತಿದ್ದಂತೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಿ.ಟಿ. ರವಿ, ‘ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಯೋಗ, ಪ್ರಾಮಾಣಿಕರಿಗೆ ಆತ್ಮಹತ್ಯೆಗೆ ಭಾಗ್ಯ’ ಎಂದು ವ್ಯಂಗವಾಡಿದರು. ‘ನಿಗಮದ ಹಣವನ್ನು ಪೂರ್ವಯೋಜಿತವಾಗಿಯೇ ಲೂಟಿ ಮಾಡಲಾಗಿದೆ. ಹಣಕಾಸು ಇಲಾಖೆಯ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಹೇಗೆ ಸಾಧ್ಯ’ ಎಂದೂ ಪ್ರಶ್ನಿಸಿದರು.

ಮುಖ್ಯಮಂತ್ರಿಯ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಹಗರಣವನ್ನು ಮುಚ್ಚಿ ಹಾಕಲು ಪೂರ್ವತಯಾರಿ ನಡೆಸಿಕೊಂಡೇ ಕಾಂಗ್ರೆಸ್‌ನವರು ಬಂದಿದ್ದಾರೆ’ ಎಂದೂ ರವಿ ಆರೋಪಿಸಿದರು. ಬಿಜೆಪಿಯ ಇತರ ಸದಸ್ಯರೂ ಅವರ ಜೊತೆ ದನಿಗೂಡಿಸಿದರು.

ADVERTISEMENT

ಅದೇ ವೇಳೆ ಎರಡೂ ಪಕ್ಷಗಳ ಸದಸ್ಯರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಮಾತಿನ ಜಟಾಪಟಿಯೂ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಮಾಡಿದ ಮನವಿಗೂ ಸದಸ್ಯರು ಸುಮ್ಮನಾಗಲಿಲ್ಲ. ಹೀಗಾಗಿ, ಕಲಾಪವನ್ನು ಗುರುವಾರಕ್ಕೆ ಸಭಾಪತಿ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.