ಬೆಂಗಳೂರು: ‘ಗೋಮಾಂಸ ತಿನ್ನುವುದನ್ನು ದಿನೇಶ್ ಗುಂಡೂರಾವ್ ಬೆಂಬಲಿಸುತ್ತಾರಾ’ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಪ್ರಶ್ನಿಸಿದರು.
'ಬ್ರಾಹ್ಮಣರಾಗಿದ್ದರೂ ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು’ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಯಾವುದನ್ನು ಉತ್ತೇಜಿಸಲು ಹೊರಟಿದ್ದಾರೆ? ಹೊಸ ದಂಧೆ ಆರಂಭಿಸಿದ್ದಾರೆಯೇ’ ಎಂದು ಮರುಪ್ರಶ್ನೆ ಹಾಕಿದರು.
‘ಒಂದೇ ದಿನ ಅಧಿಕಾರ ಸಿಕ್ಕರೆ ಗೋಹತ್ಯೆ ನಿಷೇಧಿಸುತ್ತೇನೆ ಎಂದು ಗಾಂಧಿ ಹೇಳಿದ್ದರು. ಅವರು ಗಾಂಧಿ ವಿಚಾರಧಾರೆಯನ್ನು ಒಪ್ಪುತ್ತಾರೆಯೇ ಅಥವಾ ಜಿನ್ನಾ ವಿಚಾರಧಾರೆಯನ್ನು ಒಪ್ಪುತ್ತಾರೆಯೇ?’ ಎಂದರು.
‘ಜಿನ್ನಾ ಮೂಲಭೂತವಾದಿಯಾಗಿದ್ದರು, ಸಾವರ್ಕರ್ ಅಲ್ಲ. ದೇಶವನ್ನು ಬಲಪಡಿಸುವುದು ಅವರ ಗುರಿಯಾಗಿತ್ತು’ ಎಂದೂ ಅವರು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಗಾಂಧಿಯ ಹಂತಕ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ್ದ ದಿನೇಶ್ ಗುಂಡೂರಾವ್, ‘ಸಾವರ್ಕರ್ ಆ ಕಾಲಕ್ಕೆ ಆಧುನಿಕ ಚಿಂತನೆಗಳನ್ನು ಹೊಂದಿದ್ದರು. ಬ್ರಾಹ್ಮಣರಾಗಿದ್ದೂ ಮಾಂಸ ತಿನ್ನುತ್ತಿದ್ದರು. ಅವರು ಗೋಮಾಂಸ ತಿನ್ನುತ್ತಿದ್ದರು ಎಂಬ ಮಾತೂ ಇದೆ. ಅವರೇ ಈ ಬಗ್ಗೆ ಹೇಳಿಕೊಂಡಿದ್ದರ ದಾಖಲೆಗಳು ಪುಸ್ತಕದಲ್ಲಿ ಇವೆ’ ಎಂದು ಹೇಳಿದ್ದರು.
ದಿನೇಶ್ ಅವರ ಈ ಮಾತು ಇರುವ ವಿಡಿಯೊ ತುಣುಕನ್ನು ಕರ್ನಾಟಕ ಬಿಜೆಪಿ ಘಟಕವು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ. ‘ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂದು ನಿಮ್ಮ ಬ್ರಾಹ್ಮಣ ತಂದೆ ಗುಂಡೂರಾವ್ ಹೇಳಿದ್ದರೋ ಅಥವಾ ಮುಸ್ಲಿಂ ಸಮುದಾಯದ ನಿಮ್ಮ ಪತ್ನಿ ತಬುಸ್ಸಮ್ ಹೇಳಿದ್ದರೋ’ ಎಂದು ಆ ಪೋಸ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.