ADVERTISEMENT

ದೀಪಾವಳಿಯೊಳಗೆ ಸರ್ಕಾರ ಢಮಾರ್: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 8:10 IST
Last Updated 9 ಸೆಪ್ಟೆಂಬರ್ 2024, 8:10 IST
ಸಿದ್ದರಾಮಯ್ಯ ಹಾಗೂ ಸಿ.ಟಿ. ರವಿ
ಸಿದ್ದರಾಮಯ್ಯ ಹಾಗೂ ಸಿ.ಟಿ. ರವಿ   

ಹುಬ್ಬಳ್ಳಿ: 'ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ದೀಪಾವಳಿ ಹಬ್ಬದ ಒಳಗೆ ಸರ್ಕಾರ ಢಮಾರ್ ಆಗಲಿದೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತಾಡಿದ ಅವರು, 'ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಮತ್ತು ಮುಖಂಡರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಸಮಯವನ್ನೂ ನಿಗದಿಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ಸಚಿವರು ತಾವು ಸಹ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ' ಎಂದರು.

'ಸರ್ಕಾರ ಏನೇ ಮಾಡಿದರೂ ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್' ಎಂದು ವ್ಯಂಗ್ಯವಾಡಿದ ಸಿ.ಟಿ. ರವಿ, 'ಏನೇ ಮುಚ್ವಿಟ್ಟರೂ ಇದು ಭ್ರಷ್ಟಾಚಾರದ ಸರ್ಕಾರ. ಸಿದ್ದರಾಮಯ್ಯರ ವಿರುದ್ಧ ಇರುವ ಮುಡಾ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಅಲ್ಲಿ ಮಾತ್ರ ಏನೂ ಮುಚ್ಚಿಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಎಲ್ಲವೂ ಸಾಬೀರಾಗುತ್ತದೆ. ಅದಕ್ಕೂ ಮುನ್ನ ಸಿಎಂ ರಾಜೀನಾಮೆ ನೀಡಲಿ' ಎಂದು ಆಗ್ರಹಿಸಿದರು.

ADVERTISEMENT

'ಬಿಜೆಪಿ ಕೋವಿಡ್‌ ಸಂದರ್ಭ ಭ್ರಷ್ಟಾಚಾರ ನಡೆಸಿದೆ' ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ತಮ್ಮ ತಪ್ಪನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸಲು, ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣ, ಮುಡಾ ಹಗರಣ, ಅರ್ಕಾವತಿ ಡಿ ನೋಟಿಫಿಕೇಷನ್ ಹೀಗೆ ಸಾಲು ಸಾಲು ಹಗರಣಗಳು ಸಿದ್ದರಾಮಯ್ಯರ ಅಧಿಕಾರದ ಅವಧಿಯಲ್ಲಿ ನಡೆದಿದೆ. ನೈತಿಕತೆಯಿಲ್ಲದ ಸರ್ಕಾರ ಇರಬಾರದು' ಎಂದು ಆಗ್ರಹಿಸಿದರು.

'ಹಿಂದುತ್ವ ದುರ್ಬಲಗೊಳಿಸುವ ಷಡ್ಯಂತ್ರ'

'ಭಾರತ ಬಿಟ್ಟು ಹಿಂದುತ್ವ ಇಲ್ಲ, ಹಿಂದುತ್ವ ಬಿಟ್ಟು ಭಾರತ ಇಲ್ಲ. ಆದರೆ, ಕೆಲವರು ಹಿ‌ದುತ್ವವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ನಮ್ಮದು ಉದಾತ್ ಸಂಸ್ಕೃತಿಯಾಗಿದ್ದು, ಹಿಂದುಗಳೆಲ್ಲ ಸಂಘಟಿತರಾಗಬೇಕಿದೆ' ಎಂದು ಕರೆ ನೀಡಿದರು.

'ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ‌ ಪ್ರತಿಷ್ಠಾಪಿಸಲು ಕರಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ಹೋರಾಟದ ಫಲವಾಗಿ ಮೂರು ವರ್ಷದಿಂದ ಇದೇ ಮೈದಾನದಲ್ಲಿ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತ ಬಂದಿದ್ದೇವೆ. ರಾಷ್ಟ್ರಧ್ವಜದ ಜೊತೆಗೆ ಭಗವಾಧ್ವಜವನ್ನು ಸಹ ಹಾರಿಸುತ್ತಿದ್ದೇವೆ. ಹುಬ್ಬಳ್ಳಿಯ ಮಣ್ಣಿನಲ್ಲಿ ಹೋರಾಟದ ಕಿಚ್ಚು ಇನ್ನೂ ಜೀವಂತವಾಗಿದೆ ಎಂದು ತೋರಿಸಿಕೊಟ್ಟಿದ್ದೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.