ಶಿವಮೊಗ್ಗ: ’ಹಾಸನದ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಐದರಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂಬ ವರದಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಸಿಕ್ಕಿದೆ. ಹತಾಶೆಗೊಂಡಿರುವ ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ‘ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸೊರಬದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಹಾಸನದಲ್ಲಿ ಬಿಜೆಪಿ ಗೆದ್ದಿದ್ದೇ ಕುಮಾರಸ್ವಾಮಿಗೆ ಅರಗಿಸಿಕೊಳ್ಳಲು ಆಗಿರಲಿಲ್ಲ ಎಂದು ಛೇಡಿಸಿದರು.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವ ಯೋಗ್ಯತೆ ಇದೆ. ಚಹಾ ಮಾರುವ ನರೇಂದ್ರ ಮೋದಿ ಪ್ರಧಾನಿ, ರೈತನ ಮಗ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆದರೆ, ಕುಮಾರಸ್ವಾಮಿ ಪಕ್ಷದಲ್ಲಿ ಹಾಗಿಲ್ಲ ಎಂದರು.
’ಹಾಸನದಿಂದ ಭವಾನಿ ರೇವಣ್ಣ ಅಭ್ಯರ್ಥಿ, ಎಂಎಲ್ಸಿ ಟಿಕೆಟ್ ಸೂರಜ್ ರೇವಣ್ಣಗೆ, ಎಂಪಿ ಟಿಕೆಟ್ ಪ್ರಜ್ವಲ್ ರೇವಣ್ಣಗೆ ಕೊಡಬೇಕು. ಅನಿತಾ ಕುಮಾರಸ್ವಾಮಿ ರಾಮನಗರ ಬಿಟ್ಟು ಕೊಡಲು ಮುಂದಾಗಿರುವುದು ನಿಖಿಲ್ ಕುಮಾರಸ್ವಾಮಿಗೆ. ಅದನ್ನೆಲ್ಲಾ ಅವರು ಕರೆಯೋದು ತ್ಯಾಗ ಅಂತ. ಜೆಡಿಎಸ್ ಪಕ್ಷದಲ್ಲಿ ದೊಡ್ಡಗೌಡ್ರು, ಸಣ್ಣಗೌಡ್ರು, ಮರೀಗೌಡ್ರಿಗೆ ಮಾತ್ರ ಚಾನ್ಸ್ ಇರೋದು‘ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.
’ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತಿ ಸಮಾನತೆ ಒಪ್ಪಲ್ಲ. ಹಿಂದುತ್ವ ಎಲ್ಲರಲ್ಲೂ ಸಮಾನತೆ ಬಯಸುತ್ತದೆ. ಅದೇ ಕಾರಣಕ್ಕೆ ಅವರು ಹಿಂದುತ್ವವನ್ನು ಒಪ್ಪಲ್ಲ. ಅವರಿಗೆ ಜಾತೀಯತೆ, ಅಸ್ಪೃಶ್ಯತೆ ಬೇಕು. ಹೀಗಾಗಿಯೇ ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸುವ ಕೆಲಸ ಮಾಡಿದರು‘ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.