ಬೆಂಗಳೂರು:ಕಬ್ಬನ್ ಉದ್ಯಾನದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ, ಅದೇ ಉದ್ಯಾನದ ಇಬ್ಬರು ಭದ್ರತಾ ಸಿಬ್ಬಂದಿಗೆ ಜೀವಾವಧಿ (ಸಾಯುವವರೆಗೂ) ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗಿದೆ.
ಅಸ್ಸಾಂನ ರಾಜು ಮೇಧಿ (28) ಹಾಗೂ ಬೋಲಿನ್ ದಾಸ್ (38) ಶಿಕ್ಷೆಗೆ ಗುರಿಯಾದವರು. 2015ರ ನವೆಂಬರ್‌ನಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನಗರದ 54ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಲತಾ ಕುಮಾರಿ, ಸೋಮವಾರ ಈ ಆದೇಶ ಹೊರಡಿಸಿದರು. ಸಂತ್ರಸ್ತೆಗೆ ₹2 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಚಿನ್ನ ವೆಂಕಟರವಣಪ್ಪ ವಾದಿಸಿದ್ದರು.
ಪ್ರಕರಣದ ವಿವರ:ತುಮಕೂರಿನ ಮಹಿಳೆ, ಕಬ್ಬನ್ ಉದ್ಯಾನದ ಒಳಭಾಗದಲ್ಲಿರುವ ಟೆನಿಸ್ ಕ್ಲಬ್‌ನ ಸದಸ್ಯತ್ವ ಪಡೆಯಲೆಂದು ಬೆಂಗಳೂರಿಗೆ ಬಂದಿದ್ದರು.
ಅವರು ಟೆನಿಸ್ ಕ್ಲಬ್‌ಗೆ ತಲುಪುವಷ್ಟರಲ್ಲೇ ಕಚೇರಿಯ ಅವಧಿ ಮುಗಿದು ಹೋಗಿತ್ತು. ಕೆಲ ನಿಮಿಷ ಕ್ಲಬ್ ಎದುರೇ ಕಾಯುತ್ತಿದ್ದ ಮಹಿಳೆ, ಪಾರ್ಕ್‌ನಿಂದ ಹೊರಗೆ ಹೋಗುವ ದಾರಿ ಯಾವುದೆಂದು ಭದ್ರತಾ ಸಿಬ್ಬಂದಿಯನ್ನು ಕೇಳಿದ್ದರು.
ದಾರಿ ತೋರಿಸುವ ನೆಪದಲ್ಲಿ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಅಪರಾಧಿಗಳು, ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದರಿಂದ ನೊಂದ ಮಹಿಳೆ, ಸಿದ್ದಲಿಂಗಯ್ಯ ವೃತ್ತದ ಬಳಿ ಅಳುತ್ತ ನಿಂತುಕೊಂಡಿದ್ದರು.
ರಾತ್ರಿ ಗಸ್ತಿನಲ್ಲಿದ್ದ ಕಬ್ಬನ್ ಪಾರ್ಕ್ ಠಾಣೆಯ ಎಎಸ್‌ಐ, ಮಹಿಳೆಯನ್ನು ಗಮನಿಸಿ ವಿಚಾರಿಸಿದ್ದರು. ಅವಾಗಲೇ ಮಹಿಳೆ, ಅತ್ಯಾಚಾರದ ವಿಷಯ ತಿಳಿಸಿದ್ದರು. ಬಳಿಕ ಎಎಸ್‌ಐ, ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಮರುದಿನವೇ ಪೊಲೀಸರು, ಅಪರಾಧಿಗಳನ್ನು ಬಂಧಿಸಿದ್ದರು.
‘ಅಪರಾಧಿಗಳು ಕ್ರೂರವಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾರೆ. ಹೀಗಾಗಿ, ಅವರಿಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಸನ್ನಡತೆ ಆಧಾರದಲ್ಲೂ ಬಿಡುಗಡೆಯಾಗುವ ಅವಕಾಶ ಅವರಿಗಿಲ್ಲ’ ಎಂದು ಚಿನ್ನ ವೆಂಕಟರವಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.