ಬೆಂಗಳೂರು: ‘ಸಾಗುವಳಿ ಹಕ್ಕು ಕೋರಿ ಸಲ್ಲಿಕೆಯಾಗಿರುವ ಬಗರ್‌ಹುಕುಂ ಅರ್ಜಿಗಳನ್ನು ನವೆಂಬರ್ 30ರ ಒಳಗೆ ಇತ್ಯರ್ಥ ಮಾಡದ ತಹಶೀಲ್ದಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬಗರ್‌ಹುಕುಂ ಅರ್ಜಿಗಳ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಸಾಗುವಳಿ ಹಕ್ಕು ಕೋರಿ ಅರ್ಜಿ ನಮೂನೆ 53 ಹಾಗೂ 57ರಲ್ಲಿ 14.85 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನೂ ಪರಿಶೀಲಿಸಬೇಕು. ಅರ್ಹರಿಗೆ ಭೂಹಕ್ಕು ನೀಡಬೇಕು. ಅನರ್ಹ ಅರ್ಜಿಗಳನ್ನು ಸಕಾರಣ ನೀಡಿ, ತಿರಸ್ಕರಿಸಬೇಕು ಎಂದು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗಳಿಗೆ ತಾಕೀತು ಮಾಡಿದರು.
ಅರ್ಹ ಭೂರಹಿತರಿಗೆ ಜಮೀನು ಮಂಜೂರು ಮಾಡಬೇಕು ಎನ್ನುವುದು ಕಾಂಗ್ರೆಸ್ ಸರ್ಕಾರದ ಧ್ಯೇಯ. ಅದಕ್ಕಾಗಿ ಅಕ್ರಮ–ಸಕ್ರಮ ಯೋಜನೆ ರೂಪಿಸಲಾಗಿದೆ. ಬಡ ರೈತರಿಗೆ ಜಮೀನು ಸಾಗುವಳಿ ಹಕ್ಕು ನೀಡುವುದು ಸರ್ಕಾರದ ಕರ್ತವ್ಯವೂ ಆಗಿದೆ ಎಂದರು.
ಈಗಾಗಲೇ 160 ಬಗರ್‌ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳು ಸಮಿತಿಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು ಎಂದು ಹೇಳಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಆಯುಕ್ತರಾದ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಅಗತ್ಯವಿದ್ದರಷ್ಟೇ ಕ್ಷೇತ್ರ ಕಾರ್ಯ ‘ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ಕೆಲಸದ ಒತ್ತಡ ಹೆಚ್ಚಾಗಿದೆ. ಅವರನ್ನು ಅನಗತ್ಯವಾಗಿ ಕ್ಷೇತ್ರ ಕಾರ್ಯಕ್ಕೆ ಕಳುಹಿಸಬಾರದು’ ಎಂದು ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರ್‌ಗಳಿಗೆ ಸೂಚಿಸಿದರು. ‘ಬಗರ್‌ಹುಕುಂ ಅರ್ಜಿಗಳನ್ನು ಕಚೇರಿಯಲ್ಲೇ ಕುಳಿತು ಪರಿಶೀಲಿಸಬೇಕು. ಅಗತ್ಯವಿದ್ದಾಗ ಸ್ಥಳ ಪರಿಶೀಲನೆ ನಡೆಸಬೇಕು. ಅನರ್ಹ ಅರ್ಜಿಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೆ ತಿರಸ್ಕರಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.